
ನವದೆಹಲಿ,ಸೆ.೧೯- ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿಂದು ಮಂಡನೆಯಾಗಿದೆ.ನೂತನ ಸಂಸತ್ ಭವನದಲ್ಲಿಂದು ಆರಂಭವಾದ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೆಘಾವಾಲ್ ಅವರು ಇಂದು ಈ ವಿಧೇಯಕವನ್ನು ಮಂಡಿಸಿದರು.ಮಹಿಳೆಯರ ಸಬಲೀಕರಣ ಮತ್ತು ನಾರಿಶಕ್ತಿಯನ್ನು ಗಟ್ಟಿಗೊಳಿಸಲು ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಲಾಗಿದೆ. ಈ ವಿಧೇಯಕಕ್ಕೆ ಅಂಗೀಕಾರ ದೊರೆತು ಅಂಗೀಕಾರ ನೀಡುವಂತೆ ಅವರು ಸದನವನ್ನು ಕೋರಿದರು.ನಾರಿಶಕ್ತಿಯಿಂದ ವಿಶ್ವದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ. ಮಹಿಳಾ ಮೀಸಲಾತಿ ವಿಧೇಯಕ ಈ ಹಿಂದೆ ಮಂಡನೆಯಾಗಿದ್ದರೂ ಇಂದು ಮಂಡನೆಯಾಗಿರುವ ಮಹಿಳಾ ಮೀಸಲಾತಿ ವಿಧೇಯಕದಿಂದ ಸೆ. ೧೯ ಭಾರತದ ಇತಿಹಾಸದಲ್ಲಿ ಅಮರವಾಗಲಿದೆ ಎಂದು ಪ್ರಧಾನಿಯವರು ಇದಕ್ಕೂ ಮೊದಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೇಳಿದ್ದರು.
ಈ ವಿಧೇಯಕದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಮಹಿಳಾ ಮೀಸಲಾತಿ ವಿಧೆಯಕಕೆ ಬೆಂಬಲ ನೀಡಿರುವುದರಿಂದ ಈ ವಿಶೇಷ ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗುವುದು ಬಹುತೇಕ ನಿಶ್ಚಿತ
ಕೇಂದ್ರ ಸಂಪುಟ ಒಪ್ಪಿಗೆ
ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿತ್ತು.
ಚುನಾವಣೆಗಳಲ್ಲಿ ಮಹಿಳೆಯರನ್ನು ಓಲೈಸಲು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಠಕ್ಕರ್ ಕೊಡಲು ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ ಎಂದು ಹೇಳಲಾಗಿದೆ.
ಸುಳಿವು ನೀಡಿದ್ದ ಪ್ರಧಾನಿ:
ಹಳೆಯ ಸಂಸತ್ತಿನಲ್ಲಿ ತಮ್ಮ “ವಿದಾಯ ಭಾಷಣ”ದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣಗಳಲ್ಲಿ ಒಂದಾದ “ಒಳಗೊಳ್ಳುವಿಕೆ” ಬಗ್ಗೆ ಮಾತನಾಡುವಾಗ ಮತ್ತು ಇಬ್ಬರು ಸ್ಪೀಕರ್‌ಗಳು ಸೇರಿದಂತೆ ಮಹಿಳಾ ಶಾಸಕರ ಕೊಡುಗೆಗಳ ಬಗ್ಗೆ ಪ್ರಶಂಸಿಸಿ ಮಹಿಳಾ ಮೀಸಲಾತಿ ಮಂಡಿಸುವ ಸುಳಿವು ನೀಡಿದ್ದರು.ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆ ಮಂಡಿಸುವ ಸುಳಿವಿನ ಮಾಹಿತಿ ಸೋರಿಕೆಯಾದ ತಕ್ಷಣ ಕಾಂಗ್ರೆಸ್ ಮಸೂದೆಗೆ ತನ್ನ ಬೆಂಬಲ ಘೋಷಿಸಿತ್ತು
ಈ ನಿರ್ಧಾರ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ನಿರ್ಣಾಯಕ ಸಮರ್ಥನೀಯ ಕ್ರಮಕ್ಕಾಗಿ ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ದಶಕಗಳ ಬೇಡಿಕೆಯ ಈಡೇರಿಕೆಯನ್ನು ಸೂಚಿಸುತ್ತದೆ.
ಸಂಸದರಿಗೆ ಅಗ್ನಿ ಪರೀಕ್ಷೆ
ಲೋಕಸಭೆಯಲ್ಲಿ ಮಂಡನೆಯಾಗುತ್ತಿರುವ ಮಹಿಳಾ ಮೀಸಲಾತಿ ವಿಧೇಯಕ ಎಲ್ಲ ಸಂಸದರಿಗೂ ಅಗ್ನಿಪರೀಕ್ಷೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಗೆ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಈ ವಿಧೇಯಕ ಎಲ್ಲ ಸಂಸದರಿಗೂ ಅಗ್ನಿಪರೀಕ್ಷೆಯಾಗಲಿದೆ ಎಂದು ಹೇಳಿದರು ಎನ್ನಲಾಗಿದೆ.
ಮಹಿಳಾ ಮೀಸಲಾತಿ ವಿಧೇಯಕ ೨೦೨೭ ರಿಂದ ಜಾರಿಗೆ ಬರಲಿದ್ದು, ಇದು ಸಂಸದರಿಗೆ ಅಗ್ನಿಪರೀಕ್ಷೆಯಾಗಲಿದೆ ಎಂದು ಪ್ರಧಾನಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಮೀಸಲಾತಿ ನಮ್ಮದು ಸೋನಿಯಾ
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವಾಗಲೇ ಈ ಮಸೂದೆ ನಮ್ಮದು ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ.ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಆಗಮಿಸಿದ ಸಂದರ್ಭದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾಗಾಂಧಿ ಅವರು, ಮಹಿಳಾ ಮೀಸಲಾತಿ ಮಸೂದೆ ನಮ್ಮದು ಎಂದರು.
ಮಹಿಳಾ ಮೀಸಲಾತಿ ಮಸೂದೆ ಮಂಡನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’ಹೇ ಅಪ್ನಾ ಹೈ’ ಎಂದು ಉತ್ತರಿಸಿದರು.
ಮಹಿಳಾ ಮೀಸಲತಿ ಕಾಂಗ್ರೆಸ್ ಬೆಂಬಲ
ಬಹಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿ ಸಂಸತ್ತಿನ ವಿಶೇಷ ಅಧಿವೇಶನದಲ್ಲೇ ಮಸೂದೆಯನ್ನು ಮಂಡಿಸುವ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸಿದ್ದು, ಮಹಿಳಾ ಮೀಸಲಾತಿಗೆ ಬೆಂಬಲ ನೀಡಿದೆ.
ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಕ್ಕೆ ಸಮಯ ಬಂದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ವಕ್ತಾರ ಜಯರಾಂ ರಮೇಶ್ ಹೇಳಿದ್ದಾರೆ.ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಮೀಸಲಾತಿ ಒದಗಿಸಲು ೧೯೬೬ ರಿಂದ ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ ಅದು ವಿಫಲವಾಗಿತ್ತು. ೨೦೧೦ರಲ್ಲಿ ಆಗಿನ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕರಿಸುವಲ್ಲಿ ಯಶಸ್ವಿಯಾಗಿತ್ತಾದರೂ ಲೋಕಸಭೆಯಲ್ಲಿ ಮಿತ್ರ ಪಕ್ಷಗಳ ಒತ್ತಡದಿಂದ ಮಸೂದೆ ಮಂಡನೆಯಾಗಿರಲಿಲ್ಲ ಎಂದು ಹೇಳಿದ್ದಾರೆ.
ರಾಹುಲ್‌ಪತ್ರ ವೈರಲ್
ಮಹಿಳಾ ಮೀಸಲಾತಿಯನ್ನು ಬೆಂಬಲಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಬರೆದಿದ್ದ ಪತ್ರ ಈಗ ವೈರಲ್ ಆಗಿದ್ದು, ಬೇಷರತ್ತಾಗಿ ಮಹಿಳಾ ಮೀಸಲಾತಿಯನ್ನು ಬೆಂಬಲಿಸುವಂತೆ ರಾಹುಲ್ ಬಹು ಹಿಂದೆಯೇ ಪತ್ರ ಬರೆದಿದ್ದರು. ಈ ಪತ್ರದಲ್ಲಿ ರಾಹುಲ್‌ಗಾಂಧಿ ಅವರು ಬಿಜೆಪಿ ಮಸೂದೆಯನ್ನು ಬೆಂಬಲಿಸಿದ್ದನ್ನು ಪ್ರಸ್ತಾಪಿಸಿ ಆಗಿನ ಕೇಂದ್ರ ಸಚಿವರಾಗಿದ್ದ ಅರುಣ್‌ಜೇಟ್ಲಿ ಇದನ್ನು ಐತಿಹಾಸಿಕ ಮತ್ತು ಮಹತ್ವಪೂರ್ಣ ಎಂದು ಕರೆದಿದ್ದನ್ನು ರಾಹುಲ್‌ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಈಗ ಈ ಪತ್ರ ಎಲ್ಲೆಡೆ ವೈರಲ್ ಆಗಿದೆ.
೨೦೨೯ರಿಂದ ಮೀಸಲಾತಿ ಜಾರಿ
೨೦೨೬ ರಲ್ಲಿ ಪ್ರಾರಂಭವಾಗುವ ದಶವಾರ್ಷಿಕ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಿದ ನಂತರ ಉದ್ದೇಶಿತ ಮಹಿಳಾ ಮೀಸಲಾತಿ ೨೦೨೯ ರ ವೇಳೆಗೆ ಜಾರಿಗೆ ಬರಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಮಸೂದೆಯನ್ನು ಮೊದಲ ಬಾರಿಗೆ ೧೯೯೬ ರಲ್ಲಿ ಪರಿಚಯಿಸಲಾಯಿತು ಮತ್ತು ಮಾರ್ಚ್ ೨೦೧೦ ರಲ್ಲಿ ರಾಜ್ಯಸಭೆಯು ಸಹ ಅಂಗೀಕರಿಸಿತು, ಆದರೆ ಲೋಕಸಭೆಯು ಅದನ್ನು ಅಂಗೀಕರಿಸಲು ವಿಫಲವಾದ ನಂತರ ಮಸೂದೆ ಅಂಗೀಕಾರವಾಗಿರಲಿಲ್ಲ