ಮಹಿಳೆಯರಿಗೆ ಶಬರಿಮಲೆ ಪ್ರವೇಶ ಕೇರಳ ಚುನಾವಣಾ ಅಸ್ತ್ರ

ತಿರುವನಂತಪುರಂ,ಮಾ.೨೭- ಕೇರಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಶಬರಿಮಲೆ ಪ್ರವೇಶ ವಿಷಯವನ್ನು ಅಲ್ಲಿನ ರಾಜಕೀಯ ಪಕ್ಷಗಳು ಚುನಾವಣಾ ಅಸ್ತ್ರವನ್ನಾಗಿ ಬಳಸಲು ಮುಂದಾಗಿವೆ.

ಏಪ್ರಿಲ್ ೬ರಂದು ಕೇರಳ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಹೀಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿರುವ ಇದೀಗ ರಾಜಕೀಯ ಪಕ್ಷಗಳಿಗೆ ಚುನಾವಣಾ ದಾಳವಾಗಿ ಬಿಂಬಿತವಾಗಿದೆ.

೨೦೧೮ ರಲ್ಲಿ ಸುಪ್ರೀಂಕೋರ್ಟ್ ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶ ನೀಡುವ ತೀರ್ಪು ನೀಡಿದ ಸಮಯದಲ್ಲಿ ಮುಖ್ಯಮಂತ್ರಿ ಪಿಣರಾಣಿ ವಿಜಯನ್ ಅದನ್ನು ಸ್ವಾಗತಿಸಿದ್ದರು.

ಇದೀಗ ವಿರೋಧ ಪಕ್ಷಗಳು ಈ ವಿಷಯವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಸಿಪಿಎಂ ಪಕ್ಷಕ್ಕೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ವಿಷಯ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ಸರ್ಕಾರದ ಈ ಕ್ರಮವನ್ನು ಟೀಕಿಸಿವೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿರುವ ಕ್ರಮದ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಸ್ಪಷ್ಟ ನಿಲುವನ್ನು ಜನರಿಗೆ ತಿಳಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ದೇವಾಲಯದ ವಿಷಯದಲ್ಲಿ ಆಡಳಿತರೂಢ ಸರ್ಕಾರ ತನ್ನ ನಿಲುವು ಪ್ರದರ್ಶಿಸಬೇಕು ಎಂದು ಎಲ್ಲೆಡೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಪಿಎಂ ನಾಯಕ ಮತ್ತು ದೇವಾಲಯ ವ್ಯವಹಾರಗಳ ಸಚಿವ ಕಂಡಕಪಲ್ಲಿ ಸುರೇಂದ್ರನ್ ಅವರು ೨೦೧೮ ರಲ್ಲಿ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದರು.

ಸಚಿವ ಸುರೇಂದ್ರನ್ ಅವರು ಕಾಜಾ ಕೊಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು ಈ ಕ್ಷೇತ್ರದಿಂದ ಬಿಜೆಪಿಯ ಶೋಭ ಸುರೇಂದ್ರನ್ ಕಣದಲ್ಲಿದ್ದಾರೆ.

ಶಬರಿಮಲೆಯ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಶೋಭಾ ಸುರೇಂದ್ರನ್ ಅವರು ಈ ಕ್ಷೇತ್ರದಿಂದ ಕಣಕ್ಕಿಳಿದಿರುವುದು ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿದೆ