ಮಹಿಳೆಯರಿಗೆ “ಕೈತೋಟ ನಿರ್ವಹಣೆ, ಹೂಗುಚ್ಛ ತಯಾರಿಕೆ ತರಬೇತಿ ಕಾರ್ಯಕ್ರಮ

ಬಾಗಲಕೋಟೆ,ನ.13 : ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಮತ್ತು ಶ್ರೀಮತಿ ಕಾಶವ್ವತಾಯಿ ವಿದ್ಯಾಸಿರಿ ಸೇವಾಸಂಸ್ಥೆ (ರಿ) ವಿದ್ಯಾಗಿರಿ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ “ಕೈತೋಟ ನಿರ್ವಹಣೆ & ಹೂಗುಚ್ಛ ತಯಾರಿಕೆ”ಯ ಒಂದು ದಿನದ ಉಚಿತ ತರಬೇತಿ ಶಿಬಿರವನ್ನು ಬಾಗಲಕೋಟೆಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಸಂಪನ್ಮೂಲ ಕೇಂದ್ರ ನಿರ್ದೇಶಕರಾದ ರಾಜೇಶ ಬಿ. ಇವರು ಕಾರ್ಯಕ್ರಮದ ಅವಶ್ಯಕತೆ ಹಾಗೂ ಆರೋಗ್ಯದ ಕಾಳಜಿ ಬಗ್ಗೆ ತಿಳಿಸಿದರು. ಶ್ರೀಮತಿ ಕಾಶವ್ವತಾಯಿ ವಿದ್ಯಾಸಿರಿ ಸೇವಾಸಂಸ್ಥೆಯ ಅಧ್ಯಕ್ಷರಾದ ಭೀಮನಗೌಡ ಸಂಕಪ್ಪನವರು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಿಳಿಸುತ್ತಾ ಶಿಕ್ಷಣ, ಕೃಷಿ ಉದ್ಯೋಗ ಮತ್ತು ಸಹಾಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟುವ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ ಇವರು ಆಹಾರದಲ್ಲಿ ತರಕಾರಿಗಳ ಬಳಕೆ ಮತ್ತು ಪೋಷಕಾಂಶಗಳ ಲಭ್ಯತೆ/ಕೊರತೆಯಿಂದಾಗುವ ಪರಿಗಣಾಮಗಳ ಬಗ್ಗೆ ಸವಿವರವಾಗಿ ಹೇಳಿದರು. ಹನಮಂತ ರಾವಳ ಸಿವ್ಹಿಲ್ ಇಂಜನೀಯರ್ ಮಹಾಲಿಂಗಪೂರ ಪ್ರವೃತ್ತಿಯಿಂದ ಉತ್ತಮ ಅನುಭವಿ ತಾರಸಿ ತೋಟಗಾರರಾಗಿದ್ದು, ಇರುವ ಜಾಗದಲ್ಲಿ ನಮ್ಮಲ್ಲೇ ಸಿಗುವ ಪರಿಕರಗಳ ಬಳಕೆ, ಜೀವಾಮೃತ, ಸಾವಯವ ಗೊಬ್ಬರ, ಕೀಟ ಹಾಗೂ ರೋಗರುಜಿನ ನಿರ್ವಹಣೆಗಾಗಿ ದೇಸಿ ಸೊಗಡಿನ ಉತ್ತಮ ದ್ರಾವಣಗಳ ತಯಾರಿಕೆ, ಬಳಕೆ ಬಗ್ಗೆ ತಮ್ಮ ಸಂಭ್ರಮ ಕೈತೋಟದ ಪ್ರಾತ್ಯಕ್ಷಿಕೆ ಚಿತ್ರಣವನ್ನು ತೋರಿಸುತ್ತಾ ಹೇಳಿದರು. ಇದಲ್ಲದೆ ಹಣ್ಣುಗಳ ಔಷಧಿಯ ಮತ್ತು ಅಲಂಕಾರಿಕ ಸಸ್ಯಗಳ ಉಪಯೋಗ ಮತ್ತು ಬೆಳೆಸುವ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಡಾ. ಪವನಕುಮಾರ ಸಹಾಯಕ ಪ್ರಾಧ್ಯಾಪಕರು ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟ ಇವರು ವಿವಿಧ ಹೂಗಳು ಮತ್ತು ಅಲಂಕಾರಿಕ ಸಸ್ಯಗಳ ಎಲೆ ಮತ್ತು ರೆಂಬೆಗಳನ್ನು ಬಳಸಿ ಹಲವಾರು ಬಗೆಯ ಹೂಗುಚ್ಛಗಳ ತಯಾರಿಕೆ ಮಾಡುವ ಬಗ್ಗೆ ತಿಳಿಸಿದರು.
ಶ್ರೀಮತಿ ಕಾಶವ್ವತಾಯಿ ವಿದ್ಯಾಸಿರಿ ಸೇವಾಸಂಸ್ಥೆಯ ವತಿಯಿಂದ ಹನಮಂತ ರಾವಳ ಅವರನ್ನು ಶಾಲು ಹೊದಿಸಿ ಸನ್ಮಾನಿಸುವುದಲ್ಲದೇ ತರಬೇತಿಯ ಫಲಾನುಭವಿಗಳಿಗೆ ಕಾಯಿಪಲ್ಲೆ ಬೀಜದ ಕಿಟ್‍ಗಳನ್ನು ಉಚಿತವಾಗಿ ಕೊಡುತ್ತಾ ತೋಟಗಾರಿಕೆ ಪ್ರಾರಂಭಿಸಲು ಉತ್ತೇಜಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ತರಬೇತಿ ಮುಕ್ತಾಯವಾಯಿತು.