ಮಹಿಳೆಯರಿಗೆ ಉದ್ಯೋಗ ತಾಲಿಬಾನ್ ನಿಷೇಧ

ಕಾಬೂಲ್, ಏ.೫- ವಿಶ್ವಸಂಸ್ಥೆಯ ಮಹಿಳಾ ಅಫ್ಘಾನ್ ಉದ್ಯೋಗಿಗಳಿಗೆ ಪೂರ್ವ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡದಂತೆ ತಾಲಿಬಾನ್ ಅಧಿಕಾರಿಗಳು ನಿಷೇಧ ಹೇರಿದ್ದಾರೆ.
ನಂಗರ್‌ಹಾರ್ ಪ್ರಾಂತ್ಯದಲ್ಲಿ ಕೆಲಸ ಮಾಡದಂತೆ ತನ್ನ ಮಹಿಳಾ ಸಿಬ್ಬಂದಿಯನ್ನು ತಡೆದ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಇದರಿಂದ ಮಹಿಳಾ ಸಿಬ್ಬಂದಿ ಇಲ್ಲದೇ ವಿಶ್ವಸಂಸ್ಥೆಯ ಘಟಕಗಳು ಕಾರ್ಯನಿರ್ವಹಿಸಲು ಮತ್ತು ಜೀವ ಉಳಿಸುವ ಕೆಲಸದಲ್ಲಿ ಸಹಾಯ ನೀಡಲು ಸಾಧ್ಯವಿಲ್ಲ ಎಂದಿದೆ.
ಈಗಾಗಲೇ ಹೆಣ್ಣು ಮಕ್ಕಳಿಗೆ ಆರನೇ ತರಗತಿಗಿಂತ ಹೆಚ್ಚಿನ ಶಿಕ್ಷಣವನ್ನು ಆಫ್ಘನ್‌ನಲ್ಲಿ ನಿಷೇಧಿಸಲಾಗಿದೆ. ಮಹಿಳೆಯರು ಕೆಲಸ ಮಾಡುವುದನ್ನು, ಅಧ್ಯಯನ ಮಾಡುವುದನ್ನು, ಪುರುಷ ಸಂಗಾತಿಯಿಲ್ಲದೇ ಪ್ರಯಾಣಿಸುವುದನ್ನು ಮತ್ತು ಉದ್ಯಾನಗಳಿಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಹೆಂಗಸರು ಅಡಿಯಿಂದ ಮುಡಿವರೆಗೂ ವಸ್ತ್ರದಿಂದ ಮುಚ್ಚಿಕೊಂಡಿರಲೇಬೇಕು ಎಂಬ ನಿಯಮ ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿದೆ. ಅಫ್ಘಾನ್ ಮಹಿಳೆಯರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನು ಅಲ್ಲಿನ ಸರ್ಕಾರ ನಿರ್ಬಂಧಿಸಿದೆ. ಇದು ಮಾನವೀಯ ನೆರವು ನೀಡಲು ಅಡ್ಡಿಯಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ
ಆಫಘಾನಿಸ್ತಾನದಿಂದ ಅಮೆರಿಕದ ಪಡೆಗಳು ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕ ದೇಶದಲ್ಲಿ ಕಠಿಣ ನಿಯಮಗಳನ್ನು ಹೇರಿದೆ.