ಮಹಿಳೆಯರಿಗೆ ಉತ್ತರ ಪ್ರದೇಶ ಸುರಕ್ಷಿತವಲ್ಲ ಪ್ರಿಯಾಂಕಾ ವಾಗ್ದಾಳಿ

ನವದೆಹಲಿ.ನ೧೧: ‘ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವಾಗಿದೆ. ಅದು ಸಚಿವಾಲಯ ಇರಲಿ ಅಥವಾ ರಸ್ತೆ ಅಥವಾ ಯಾವುದೇ ಸ್ಥಳವಿರಲಿ. ಇದು ವಾಸ್ತವ ಸ್ಥಿತಿ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ.
ಲಖನೌದಲ್ಲಿರುವ ಬಾಪು ಭವನ್‌ನಲ್ಲಿ ಗುತ್ತಿಗೆದಾರ ಸಿಬ್ಬಂದಿಯೊಬ್ಬರಿಗೆ ಕಿರುಕುಳ ನೀಡಿದ್ದ ಆರೋಪದಡಿ ಅಧಿಕಾರಿಯೊಬ್ಬರನ್ನು ಬಂಧಿಸಿರುವ ವರದಿಯನ್ನು ಉಲ್ಲೇಖಿಸಿ ಅವರು ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಿಯು ಕಿರುಕುಳ ನೀಡಿದ್ದ ವಿಡಿಯೊ ವೈರಲ್ ಆಗಿತ್ತು.
ಲೈಂಗಿಕ ಕಿರುಕುಳ ದೂರಿನ ಕುರಿತು ಕ್ರಮ ಜರುಗಿಸದ ಕಾರಣ ಉತ್ತರ ಪ್ರದೇಶದ ಸಹೋದರಿಯೊಬ್ಬರು ಕಿರುಕುಳ ಘಟನೆಯನ್ನು ವಿಡಿಯೊ ಮಾಡಬೇಕಾಗಿಯಿತು. ಆಕೆಯ ತಾಳ್ಮೆ ಮತ್ತು ಹೋರಾಟದ ಶಕ್ತಿ ಎಂತಹದ್ದಿರಬಹುದು ಎಂದೂ ಟ್ವೀಟ್‌ನಲ್ಲಿ ಹೇಳಿದ್ದಾರೆ.
‘ರಾಜ್ಯದಲ್ಲಿ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಟ್ಟಾಗಬೇಕು. ನೀನೊಬ್ಬ ಮಹಿಳೆ. ನೀನು ಹೋರಾಡಬೇಕು. ದೇಶದ ಎಲ್ಲ ಮಹಿಳೆಯರು ನಿನ್ನೊಂದಿಗೆ ಇದ್ದೇವೆ’ ಎಂದು ಪ್ರಿಯಾಂಕಾ ಅವರು ಮಹಿಳೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಆಗಾಗ್ಗೆ ಚಾಟಿ ಬೀಸುತ್ತಿದೆ. ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಮಿತಿ ಮೀರಿವೆ ಎಂದೂ ಪಕ್ಷ ಟೀಕಿಸಿದೆ. ಆದರೆ, ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಾಕರಿಸಿದ್ದಾರೆ.