ಮಹಿಳೆಯರಿಗೆ ಉಚಿತ ಪ್ರಯಾಣ

ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಜಾರಿ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಬೆಂಗಳೂರು,ಮೇ.೩೦- ರಾಜ್ಯ ವಿಧಾನಸಭೆಯ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಗ್ಯಾರಂಟಿಯಂತೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಯಾವುದೇ ಷರತ್ತುಗಳು ಇಲ್ಲ, ಎಲ್ಲಾ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಪ್ರಯಾಣಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಭರವಸೆಯಂತೆ ಉಚಿತ ಬಸ್ ಪ್ರಯಾಣದ ನಿರೀಕ್ಷೆಯಲ್ಲಿದ್ದ ರಾಜ್ಯದ ಮಹಿಳೆಯರಿಗೆ ಸಾರಿಗೆ ಸಚಿವರು ಷರತ್ತುಗಳಿಲ್ಲದೆ ಉಚಿತ ಪ್ರಯಾಣದ ಘೋಷಣೆ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.
ಬೆಂಗಳೂರಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿಂದು ಸಾರಿಗೆ ಸಂಸ್ಥೆಯ ೪ ನಿಗಮಗಳ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ರಾಮಲಿಂಗಾರೆಡ್ಡಿಯವರು ನಮ್ಮ ಪ್ರಣಾಳಿಕೆಯಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಯಾವುದೇ ಷರತ್ತು ಇಲ್ಲ. ಎಪಿಎಲ್, ಬಿಪಿಎಲ್ ಎಂದು ಹೇಳಿಲ್ಲ ಹಾಗಾಗಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಬಗ್ಗೆ ನಾಳಿನ ಮುಖ್ಯಮಂತ್ರಿಗಳ ಸಭೆಯಲ್ಲಿ ವಿವರ ನೀಡುತ್ತೇವೆ ಅಂತಿಮವಾಗಿ ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ಇಂದಿನ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಯಾವುದೇ ಷರತ್ತುಗಳನ್ನು ವಿಧಿಸುವ ತೀರ್ಮಾನ ಆಗಿಲ್ಲ. ಯಾವುದೇ ಷರತ್ತುಗಳು ಇಲ್ಲ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾಳೆ ವಿಧಾನಸೌಧದಲ್ಲಿ ಎಲ್ಲಾ ಸಚಿವರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಇಂದಿನ ಸಭೆಯ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಹಾಗೆಯೇ ಮಹಿಳೆಯರ ಉಚಿತ ಪ್ರಯಾಣಕ್ಕೆ ತಗುಲುವ ವೆಚ್ಚ ಸಾರಿಗೆ ನಿಗಮಗಳ ಮೇಲೆ ಆಗುವ ಆರ್ಥಿಕ ಹೊರೆ ಸೇರಿದಂತೆ ಎಲ್ಲಾ ಅಂಶಗಳ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದು ಎಂದರು.
ಅದು ಅಲ್ಲದೆ, ಷರತ್ತು ವಿಧಿಸುವ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ಇನ್ನೂ, ಇದಕ್ಕೆ ತಗಲುವ ವೆಚ್ಚ, ಇಲಾಖೆ ಮೇಲಿನ ಪರಿಣಾಮ ಸೇರಿದಂತೆ ಇನ್ನಿತರ ಅಂಶಗಳ ಪ್ರಸ್ತಾವನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಎಪಿಎಲ್, ಬಿಪಿಎಲ್ ಪಡಿತರ ಚೀಟಿ ಎಂಬ ಷರತ್ತು ಹಾಕುವ ಕುರಿತು ಚರ್ಚೆ ಮಾಡಿಲ್ಲ. ವಿದ್ಯಾರ್ಥಿಗಳು, ಮಹಿಳೆಯರು, ಉದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಪ್ರಯಾಣ ಉಚಿತವಾಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದರು.
ನಾಳೆ ನಡೆಯಲಿರುವ ಸಭೆಯಲ್ಲಿ ಗ್ಯಾರಂಟಿ ಕುರಿತು ಮಹತ್ವದ ಸಭೆಯೂ ವಿಧಾನಸೌಧದಲ್ಲಿ ನಡೆಯಲಿದ್ದು, ಪ್ರಮುಖ ವಿಷಯಗಳನ್ನು ಅಲ್ಲಿಯೇ ಪ್ರಸ್ತಾಪ ಮಾಡಲಾಗುವುದು ಎಂದ ಅವರು, ಕಾಂಗ್ರೆಸ್ ಸರ್ಕಾರ ನೀಡಿರುವ ಎಲ್ಲಾ ಭರವಸೆಗಳನ್ನು ನಾವು ಈಡೇರಿಕೆ ಮಾಡುತ್ತೇವೆ. ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದರು.
ಈ ಸಭೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಅಧಿಕಾರಿಗಳಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಆದಾಯ ಕುರಿತು ಮಾಹಿತಿ ಸಂಗ್ರಹಿಸಿದರು.
ರಾಜ್ಯ ವ್ಯಾಪ್ತಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಪೈಕಿ ಒಟ್ಟು ೨೩೯೭೮ ವಾಹನಗಳಿವೆ. ಈ ಪೈಕಿ ಸಿಬ್ಬಂದಿಗಳ ಸಂಖ್ಯೆಯೂ ೧, ೦೪,೪೫೦ ರಷ್ಟು ಇದ್ದಾರೆ. ಇನ್ನೂ, ೮೨.೫೧ ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.
ಅದೇ ರೀತಿ, ರಾಜ್ಯದಲ್ಲಿ ನಾಲ್ಕು ನಿಗಮಗಳ ಪೈಕಿ ಒಟ್ಟು ೪೦ ವಿಭಾಗಗಳಿದ್ದು, ಈ ಪೈಕಿ ೨೪೦ ಘಟಕಗಳಿದ್ದು, ಪ್ರತಿ ನಿತ್ಯವ
ಒಟ್ಟು ೨೩೧೩ ಲಕ್ಷ ಗಳಷ್ಟು ಸಾರಿಗೆ ಆದಾಯ ಬರುತ್ತಿದೆ. ವಾರ್ಷಿಕವಾಗಿ ೮೯೪೬.೮೫ ಕೋಟಿ ಆದಾಯ ಬಂದಿದೆ ಎಂದು ಅವರು ವಿವರಿಸಿದರು.
ಅಲ್ಲದೆ ಸಾರಿಗೆ ಇಲಾಖೆಯ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಮೇ-೨೦೧೩ ರಿಂದ ಆಗಸ್ಟ್-೨೦೧೮ರ ವರೆಗೆ ಒಟ್ಟಾರೆ ೨೦೫ ಮತ್ತು ೨೦೧೮ರಿಂದ ೨೦೨೩ ರವರೆಗೆ ೫೪ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ ಎಂದು ಅವರು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಷರತ್ತು ಇಲ್ಲದೇ ಪಯಾಣ..!
ಪ್ರಣಾಳಿಕೆಯಂತೆ ನಾವು ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೆ ತರುತ್ತಿದ್ದು, ಎಪಿಎಲ್, ಬಿಪಿಎಲ್ ಎಂಬ ಷರತ್ತು ಇಲ್ಲದೇ, ಜಾರಿಗೆ ತರಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿ ಮೇಲೆ ಗರಂ…!
ಬಿಜೆಪಿಗೆ ಜನರು ಐದು ವರ್ಷಗಳ ಕಾಲ ಮನೆಯಲ್ಲಿ ಇರುವಂತೆ ಜನ ಬುದ್ಧಿ ಕಲಿಸಿದ್ದಾರೆ.ಆದರೂ, ಗ್ಯಾರಂಟಿಗಳ ಕುರಿತು ಜನರಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಅವರು ಸಲಹೆ ನೀಡಲಿ, ಅದು ಬಿಟ್ಟು ಇಲ್ಲಸಲ್ಲದ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.