ಮಹಿಳೆಯರಿಂದಲೇ ಎಳೆಯಲ್ಪಟ್ಟ ಶ್ರೀ ಖಾಸ್ಗತ ರಥೋತ್ಸವಅಮಲ್ಯಾಳ ಶಾಖಾ ಮಠದ ಶ್ರೀ ಖಾಸ್ಗತೇಶ್ವರ ರಥೋತ್ಸವ

ತಾಳಿಕೋಟೆ : ಮೇ.4:ತಾಳಿಕೋಟೆ ತಾಲೂಕಿನ ಶ್ರೀ ಖಾಸ್ಗತೇಶ್ವರ ಮಠದ ಈಗೀನ 5 ಶಾಖಾ ಮಠಗಳಲ್ಲಿ ಒಂದಾದ ಸಮಿಪದ ಅಮಲ್ಯಾಳ ಗ್ರಾಮದ ಶ್ರೀ ಖಾಸ್ಗತೇಶ್ವರ ಶಾಖಾ ಮಠದ ವತಿಯಿಂದ ಅಮಲ್ಯಾಳ ಗ್ರಾಮದ ಭಕ್ತ ಸಮೂಹದ ಅಪೇಕ್ಷೆಯಂತೆ ಹಾಗೂ ಈ ಹಿಂದಿನ ಪೀಠಾಧಿಪತಿ ಲಿಂ.ಶ್ರೀ ವಿರಕ್ತಶ್ರೀಗಳ ನಿದರ್ಶನದಂತೆ ಮೇ.2 ರಂದು ನೂತನ ರಥೋತ್ಸವವು ವಿಜೃಂಬಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ಕಳೆದ ಏಪ್ರೀಲ್ 21ರಿಂದ ಸಾಗಿಬಂದ ಶ್ರೀ ಖಾಸ್ಗತೇಶ್ವರರ ಪುರಾಣ ಪ್ರವಚನವು ಮೇ 1 ರಂದು ಮಂಗಲಗೊಂಡಿತು.
ಮೇ. 2 ರಂದು ಜರುಗಿದ ರಥೋತ್ಸವದ ದಿನದಂದು ನಸುಕಿನ ಜಾವ ಶ್ರೀ ಖಾಸ್ಗತೇಶ್ವರ ಹಾಗೂ ವಿರಕ್ತಶ್ರೀಗಳ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಮಹಾ ಮಂಗಳಾರತಿ ಜರುಗಿತಲ್ಲದೇ ನಂತರ ಆನೆ ಅಂಭಾರಿಯ ಮೇಲೆ ಉಸ್ತವ ಶ್ರೀ ಖಾಸ್ಗತರ ಮೂರ್ತಿ ಹಾಗೂ ಈಗೀನ ಪಟ್ಟಾಧೀಶರಾದ ಶ್ರೀ ಸಿದ್ದಲಿಂಗ ದೇವರ ಮೆರವಣಿಗೆ ಜರುಗಿತು.
ಈ ಮೆರವಣಿಗೆಯಲ್ಲಿ ಸುಮಂಗಲೆಯರಿಂದ ಗಂಗಸ್ಥಳ ಹಾಗೂ ಫಲ್ಲಕ್ಕಿ ಉತ್ಸವವು ವಿವಿಧ ವಾಧ್ಯ ವೈಭವಗಳೊಂದಿಗೆ ಜರುಗಿತು.
ವಿಶೇಷವಾಗಿ ಲಿಂ.ವಿರಕ್ತಶ್ರೀಗಳು ಹೇಳಿದಂತೆ ಸಾಯಂಕಾಲ ಜರುಗಿದ ರಥೋತ್ಸವವನ್ನು ಸುಮಂಗಲೆಯರೇ ಎಳೆದು ಭಕ್ತಿಭಾವ ಮೆರೆದರು.
ಲಿಂ.ವಿರಕ್ತಶ್ರೀಗಳ ಕನಸು ನನಸು
2013ನೇ ಸಾಲಿನಲ್ಲಿಯೇ ಶ್ರೀ ಖಾಸ್ಗತೇಶ್ವರ ಮಠದ ಈ ಹಿಂದಿನ ಪೀಠಾಧಿಪತಿ ಲಿಂ.ವಿರಕ್ತಶ್ರೀಗಳು ಅಮಲ್ಯಾಳ ಗ್ರಾಮಕ್ಕೆ ಬೆಟ್ಟಿ ನೀಡಿದಾಗ ಶ್ರೀ ಮಠದ ಜೀರ್ಣೋದ್ದಾರ ಕುರಿತು ಚರ್ಚೆಯಾಯಿತು. ಈ ಕುರಿತು ನಿಂಗನಗೌಡ ಎಂಬ ಗಣ್ಯರು ಶ್ರೀ ಮಠದ ನಿರ್ಮಾಣಕ್ಕಾಗಿ ಒಂದುವರೇ ಏಕರೆ ಜಾಗೆ ನೀಡಿ ಸುಸರ್ಜಿತ ಶ್ರೀ ಖಾಸ್ಗತ ಶಾಖಾ ಮಠವು ನಿರ್ಮಾಣವಾಗಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯವೂ ಜರುಗಿತು. ಲಿಂ. ವಿರಕ್ತಶ್ರೀಗಳು ಹೇಳಿದಂತೆ ಶ್ರೀಮಠದ ವತಿಯಿಂದ ಶ್ರೀ ಖಾಸ್ಗತೇಶ್ವರರ ರಥೋತ್ಸವವು ಜರುಗಬೇಕು ಅದು ಪ್ರತಿ ವರ್ಷ ಸುಮಂಗಲೆಯರಿಂದಲೇ ಎಂಬ ಮಾತಿನಂತೆ ಶ್ರೀಗಳ ಕನಸ್ಸು ನನಸು ಮಾಡಲು ಗ್ರಾಮದ ಭಕ್ತ ಸಮೂಹ ಒಗ್ಗಟ್ಟಾಗಿ ಸುಮಾರು 20 ಲಕ್ಷ ರೂ. ಸಂಗ್ರಹ ಮಾಡಿ ಮುದ್ದೇಬಿಹಾಳದ ರಥದ ಶಿಲ್ಪಿಯಾದ ಪರಶುರಾಮ ಪವಾರ ಅವರ ಕಲೆಯಂತೆ ನಿರ್ಮಾಣ ಮಾಡಿ ಶ್ರೀಗಳು ತಿಳಿಸಿದಂತೆ ದಶಮಾನೋತ್ಸವ ಅಂಗವಾಗಿ ಆನೆ ಅಂಭಾರಿಯೊಂದಿಗೆ ಮೆರವಣಿಗೆ ನಿರ್ಮಾಣಗೊಂಡ ಸುಮಾರು 30 ಅಡಿ ಎತ್ತರದ ನೂತನ ರಥೋತ್ಸವವನ್ನು ಸುಮಂಗಲೆಯರಿಂದಲೇ ಏಳೆಯಿಸಿ ಲಿಂಗೈಕ್ಯ ವಿರಕ್ತಶ್ರೀಗಳ ಕನಸು ನನಸು ಮಾಡಿದ ಕೀರ್ತಿ ಸಮಸ್ತ ಅಮಲ್ಯಾಳ ಗ್ರಾಮದ ಸದ್ಭಕ್ತ ಮಂಡಳಿಗೆ ಸಲ್ಲುತ್ತದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲವಷ್ಟೇ.