
ಬೀದರ್:ಮಾ.14: ಮಹಿಳೆಯರು ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಅಂಚೆ ನೌಕರರ ರಾಷ್ಟ್ರೀಯ ಮಹಿಳಾ ಸಮಿತಿ ಅಧ್ಯಕ್ಷೆ ಮಂಗಲಾ ಭಾಗವತ್ ಹೇಳಿದರು.
ಅಖಿಲ ಭಾರತೀಯ ಅಂಚೆ ನೌಕರರ ಒಕ್ಕೂಟದ ಬೀದರ್ ವಿಭಾಗದ ವತಿಯಿಂದ ಇಲ್ಲಿಯ ಹೊಟೇಲ್ ಕನಕಾದ್ರಿ ಕಂಫರ್ಟ್‍ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಮನಸ್ಸು ಮಾಡಿದರೆ ಸಾಧನೆಗೆ ಯಾವುದೂ ಅಸಾಧ್ಯ ಅಲ್ಲ ಎಂದು ನುಡಿದರು.
ಅಂಚೆ ನೌಕರರ ಒಕ್ಕೂಟವು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದೆ. ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.
ಒಂದೇ ದಿನದಲ್ಲಿ 597 ಅಂಚೆ ಖಾತೆ ತೆರೆದ ಹಜನಾಳ ಅಂಚೆ ಶಾಖೆಯ ವೀಣಾ ಕಾಂಬಳೆ ಹಾಗೂ ಮೂರು ದಶಕಗಳಿಂದ ಉಳಿತಾಯ ಏಜೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಈಶ್ವರಮ್ಮ ನಂದಕುಮಾರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಬೀದರ್ ವಿಭಾಗದ ಜಂಟಿ ಕಾರ್ಯದರ್ಶಿ ಚಿದಾನಂದ ಕಟ್ಟಿ, ಶ್ರುತಿ, ವೀಣಾ, ಪದ್ಮಿನಿ, ಮಂಜುಳಾ, ಶ್ವೇತಾ, ಸುಜಾತಾ ಇದ್ದರು.
ಸಂಘದ ಬೀದರ್ ವಿಭಾಗದ ಕಾರ್ಯದರ್ಶಿ ಕಲ್ಲಪ್ಪ ಗೋಣಿ ಸ್ವಾಗತಿಸಿದರು. ಗಾಯತ್ರಿ ಲಡ್ಡ ನಿರೂಪಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.