
ಕೋಲಾರ,ಮಾ.೧೧- ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನಕ್ಕೆ ಅಪಚಾರವಾಗುವಂತೆ ತಮ್ಮ ಸ್ಥಾನದ ಘನತೆಯನ್ನು ಮರೆತು ಬೇಜವಾಬ್ದಾರಿತನದಿಂದ ಮಹಿಳೆಯನ್ನು ನಿಂದಿಸಿರುವ ಸಂಸದ ಎಸ್.ಮುನಿಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಂದು ಸಂಸದ ಎಸ್.ಮುನಿಸ್ವಾಮಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಡಿಯಲ್ಲಿ ನಾನು ಆಯ್ಕೆಯಾಗಿದ್ದೇನೆ ಎಂಬುದನ್ನು ಮರೆತು ಅಸಂವಿಧಾನಿಕವಾಗಿ ಬಾಬಾ ಸಾಹೇಬ್ ಅವರ ಸಂವಿಧಾನಕ್ಕೆ ಅಪಚಾರ ಎಸಗಿ ಮಹಿಳೆಯರ ಬಗ್ಗೆ ಅಪಹಾಸ್ಯವಾಗಿ ಬೇಜವಾಬ್ದಾರಿತನದಿಂದ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ಗೌರವವಿಲ್ಲದೆ ನಡೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ ಕಾರ್ಯಕ್ರಮದಲ್ಲಿ ಮಹಿಳೆಯನ್ನು ನೀನು ಹಣೆಗೆ ಕುಂಕುಮ ಏಕೆ ಇಟ್ಟಿಲ್ಲ ಎಂದು ತಮ್ಮ ಸ್ಥಾನದ ಗೌರವ ಹಾಗೂ ಜವಾಬ್ದಾರಿ ಮರೆತು ಅಪಚಾರ ಮಾಡಿರುವುದು ಖಂಡನೀಯ. ಸಂವಿಧಾನ ವಿರೋಧಿ ಬಿಜೆಪಿ ಪಕ್ಷದ ಸಂಸದ ಎಸ್.ಮುನಿಸ್ವಾಮಿ ಅವರು ತಮ್ಮ ಲೋಕಸಭಾ ಸದಸ್ಯ ಸ್ಥಾನಕ್ಕೆ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.