ಮಹಿಳೆಗೆ ಸಾವಿಗೆ ಸಚಿವ ಆನಂದ್‍ಸಿಂಗ್ ರಿಂದ ಸ್ಪಂದನೆ ಇಲ್ಲ:


ಸಂಜೆವಾಣಿ ವಾರ್ತೆ
ಹೊಸಪೇಟೆ ಜ16: ನಗರದಲ್ಲಿ ಕಲುಷಿತ ನೀರು ಕುಡಿದು ಮಹಿಳೆ ಮೃತಪಟ್ಟರೂ ಸ್ಥಳೀಯ ಶಾಸಕ ಆನಂದ ಸಿಂಗ್ ಅವರು ಕನಿಷ್ಠ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ಹಿಟ್ನಾಳ್ ದೂರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಸೌಜನ್ಯಕ್ಕೂ ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ. ಒಂದು ವಾರ ಕಳೆದರೂ ಇಂದಿಗೂ ಜನರು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ನೂರಾರು ಕೋಟಿ ರು. ಖರ್ಚು ಮಾಡಿದರೂ ಇನ್ನೂ 20ಕ್ಕೂ ಹೆಚ್ಚು ವಾರ್ಡ್‍ಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹಳೆಯ ಪೈಪ್‍ಗಳನ್ನೇ ರಿಪೇರಿ ಮಾಡಿ ಚರಂಡಿ ನೀರು ಮಿಶ್ರಣವಾಗಿದ್ದು, ಕಲುಷಿತ ನೀರು ಕುಡಿದು ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಇದಕ್ಕೆ ಉತ್ತರವೇ ಕೊಡುತ್ತಿಲ್ಲ. ಮೃತಪಟ್ಟವರ ಕುಟುಂಬಕ್ಕೆ ಪರಿಹಾರವೂ ಕೊಟ್ಟಿಲ್ಲ. ಆಸ್ಪತ್ರೆಯಲ್ಲಿರುವವರನ್ನೂ ಮಾತನಾಡಿಸಲು ಹೋಗಿಲ್ಲ. ವಿಜಯನಗರದಲ್ಲಿ 15 ವರ್ಷಗಳಿಂದ ಕುಡಿಯುವ ನೀರು ಕೊಡಲು ಆಗುತ್ತಿಲ್ಲ. ಮೂಲಭೂತ ಸೌಕರ್ಯ ಕೊಡದೆ ಪ್ರಚಾರ ಪಡೆದುಕೊಂಡಿರುವುದೇ ಅಭಿವೃದ್ಧಿಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯನಗರ ಕ್ಷೇತ್ರದಲ್ಲಿ ಜನರು ನೋವಿನಿಂದ ಹೇಳುತ್ತಿದ್ದಾರೆ. ಐಎಸ್‍ಆರ್ ಸಕ್ಕರೆ ಕಾರ್ಖಾನೆ ಬಂದ್ ಆದ ಮೇಲೆ ಆರ್ಥಿಕವಾಗಿ ನಷ್ಟಕ್ಕೊಳಗಾಗಿದ್ದಾರೆ. ಇದು ನಮ್ಮ ಮಾತಲ್ಲ. ಜನರ ಮನದಾಳವನ್ನು ನಾವು ಮಾತನಾಡುತ್ತಿದ್ದೇವೆ. ಅವರ ತಪ್ಪು ಇರದಿದ್ದರೆ ವಿಷಯಾಂತರ ಮಾಡುವುದನ್ನು ಬಿಟ್ಟು ಜನರಿಗೆ ಮನವರಿಕೆ ಮಾಡಲಿ ಎಂದು ಸವಾಲೆಸೆದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ್ ಶೆಟ್ಟರ್, ಮುಖಂಡರಾದ ಬಣ್ಣದಮನೆ ಸೋಮಶೇಖರ್, ವೀರಾಸ್ವಾಮಿ, ವೀರಭದ್ರ ನಾಯಕ, ಸಿ.ಖಾಜಾಹುಸೇನ್, ಲಿಂಗಣ್ಣ ಸೇರಿದಂತೆ ಇತರರಿದ್ದರು.