
ರಾಯಚೂರು,ಮಾ.೧೫- ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಅನುಕೂಲಗಳು ತಂದಿದ್ದರು. ಮಹಿಳೆ ಅಸಮರ್ಥಳು ಎಂಬ ಹಣೆ ಪಟ್ಟಿ ಕಟ್ಟಿ ಅವಳನ್ನು ಅವಕಾಶ ವಂಚಿತರನ್ನಾಗಿಸುವುದನ್ನು ತಡೆಯಲು ಜಾಗೃತಿ ಮೂಡಿಸಲು ಮಹಿಳಾ ದಿನಾಚರಣೆಯಂತ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಹೇಮಲತಾ ಎಚ್.ಎಮ್. ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀವಾದ ಎಂಬುವುದು ಮಾನವೀಯತೆ, ನ್ಯಾಯಯುತ ಸಮಾಜ ಸೃಷ್ಟಿಸಲು ಹುಟ್ಟಿಕೊಂಡಿರುವುದೇ ಹೊರತು ಪುರುಷರ ವಿರುದ್ಧವಾಗಿ ಅಲ್ಲ, ಇಂದು ಮಹಿಳಾ ಪರಿಸ್ಥಿತಿಯ ಪುನರಾವಲೋಕನ ಆಗಬೇಕಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಪಾಲ್ಗೋಂಡು ಮುಂಬರಲಿ ಎಂದು ಉದ್ಘಾಟಕ ನುಡಿಗಳನ್ನಾಡಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ವಿವಿಯ ಕುಲಸಚಿವರಾದ ಪ್ರೊ.ವಿಶ್ವನಾಥ ಎಂ. ಮಾತನಾಡಿ, ಲಿಂಗತ್ವ ಮತ್ತು ಸಮಾನತೆಯ ಬಗ್ಗೆ ಬಹಳಷ್ಟು ಚರ್ಚೆ ಆಗುವುದು, ಚಿಂತನೆಗಳನ್ನು ಹೊರಹಾಕುವುದು, ಜಾಗೃತಿ ಮೂಡಿಸುವುದು, ನಿದರ್ಶನಗಳನ್ನು ನೀಡಿ ಅವಳು ಸಬಲಳು ಮಹಿಳಾ ಹೋರಾಟಕ್ಕೆ ಸ್ಪಂದಿಸಿ ಕೈ ಜೋಡಿಸುವುದು ಸ್ವಾಗತಾರ್ಹ, ಆದರೆ ಎಲ್ಲಿಯವರೆಗೆ ಎಲ್ಲರೂ ಜಾತಿ, ಧರ್ಮ, ಕುಲ ಎಂಬ ಭೇದ ಭಾವವನ್ನು ಬಿಟ್ಟು ಹೆಣ್ಣನ್ನು ಮನುಷ್ಯಳಂತೆ ಕಾಣುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟ ಸಾಗುತ್ತಲೆ ಇರುತ್ತದೆ. ಇಲ್ಲಿ ಬದಲಾಗಬೇಕಾದದ್ದು ವ್ಯಕ್ತಿಯ ವ್ಯಕ್ತಿಗತದ ಆಲೋಚನೆಗಳು ಅಂತಹ ಆಲೋಚನೆಗಳು ಶಿಕ್ಷಣ ಪಡೆದ ನಾವೆಲ್ಲರು ಮಾಡಬೇಕಾದದ್ದು ಅವಶ್ಯಕ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಕುಲಸಚಿವರು (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ ಎಂ. ಮಾತನಾಡಿ, ಮಹಿಳೆಯರು ಎದುರಿಸುತ್ತಿರುವ ಅಸಮಾನತೆಯನ್ನು ಹೋಗಲಾಡಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಮೂಡಿ ಬರಬೇಕು. ಮಹಿಳೆಯಾವಾಗಲು ಶಕ್ತಿಶಾಲಿ ಅವರಿಗೆ ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯಲು ಅವಕಾಶ ಕಲ್ಪಿಸಿಕೊಟ್ಟು ಸಮಾನ ಬದುಕನ್ನೂ ರೂಪಿಸಿಕೊಳ್ಳುವಂತೆ ಮಾಡಬೇಕು. ಮನೆ ಮತ್ತು ಸಮಾಜ ಬದಲಿಸುವ ಶಕ್ತಿ ಸ್ತ್ರೀಯರಲ್ಲಿದೆ. ದೇಶದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಹಿಳೆಯರ ಸ್ಥಾನಮಾನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಮಸ್ಯೆಗಳಿಂದ ಮಹಿಳೆ ಹೊರಬಂದಾಗ ಮಾತ್ರ ಮುಂದೆ ಹೋಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾವಿವಿಯ ಉಪ ಕುಲಸಚಿವರಾದ ಡಾ.ಜಿ.ಎಸ್.ಬಿರಾದರ, ಸಮಾಜ ವಿಜ್ಞಾನ ನಿಕಾಯ ಡೀನರಾದ ಪ್ರೊ.ನುಸ್ರತ್ ಫಾತಿಮಾ, ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಕಲಾ ಮತ್ತು ಶಿಕ್ಷಣ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇಂಗ್ಲೀಷ್ ವಿಭಾಗದ ಅತಿಥಿ ಉಪನ್ಯಾಸಕ ಅನಿಲ್ ಅಪ್ರಾಳ ಪ್ರಾರ್ಥಿಸಿದರು, ಮಹಿಳಾ ಅಧ್ಯಯನ ವಿಭಾಗದ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ತಾಯಪ್ಪ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು, ಡಾ.ಶಾಂತಾದೇವಿ ಅತಿಥಿ ಪರಿಚಯಮಾಡಿದರು, ಡಾ.ಭೀಮೇಶ ವಂದಿಸಿದರು, ಡಾ.ಅನಿಲ್ ಕುಮಾರ ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ರಶ್ಮೀರಾಣಿ ಅಗ್ನಿಹೋತ್ರಿ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.