ಮಹಿಳೆಗೆ ಸಮಾನ ಅವಕಾಶ ಒದಗಿಸಿ


ಬ್ಯಾಡಗಿ,ಮಾ.9: ದೇಶದಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ಸಕ್ರಿಯಗೊಳಿಸಲು ಹಲವಾರು ಮಾರ್ಗಗಳಿದ್ದು, ಇದನ್ನು ನನಸಾಗಿಸಲು ಜನರು ಮತ್ತು ಸರ್ಕಾರ ಸಾಮೂಹಿಕವಾಗಿ ಮುಂದಾಗಬೇಕು ಎಂದು ವಿಜಯಲಕ್ಷ್ಮಿ ವರದಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಬನಶಂಕರಿ ಹಾಗೂ ಶಾಕಾಂಬರಿ ಮಹಿಳಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು, ಇದರಿಂದ ಮಹಿಳೆಯರು ತಮ್ಮ ಜೀವನವನ್ನು ನಿರ್ಮಿಸಿಕೊಳ್ಳಲು ಅಕ್ಷರಸ್ಥರಾಗಿ ಬೆಳೆಯುತ್ತಾರೆ. ಲಿಂಗ ಭೇದವಿಲ್ಲದೆ ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಅವಕಾಶಗಳನ್ನು ಒದಗಿಸಬೇಕು. ಅಲ್ಲದೆ, ಅವರ ಕೆಲಸಕ್ಕೆ ಸಮಾನವಾದ ಪರಿಹಾರವನ್ನು ಸಹ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಮತ್ತು ಮಹಿಳಾ ಮಂಡಳಿಯಿಂದ ಮಹಿಳೆಯರಿಗೆ ಹೊಸದಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಒಮ್ಮತದಿಂದ ನಿರ್ಣಯವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಂಜುಳಾ ಮಾಗಳದ, ಮಂಜುಳಾ ಬೆಳಕೇರಿ, ಚಂಪಾ ಮತ್ತೂರ, ಚಿನ್ನಮ್ಮ ಹೊತಗಿಗೌಡ್ರ, ಹೇಮಲತಾ ಮುದ್ದಣ್ಣನವರ, ಲಲಿತಾ ಸದಲಗಿ, ಪುಷ್ಪಾ ಮಾಳಗಿ, ದೀಪಾ ಕುಂಚೂರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.