ಮಹಿಳೆಗೆ ಅವಮಾನ; ಜೀವಬೆದರಿಕೆ: ವ್ಯಕ್ತಿಗೆ 3 ವರ್ಷ ಜೈಲು

ಕಲಬುರಗಿ,ಸೆ 23: ಮಹಿಳೆಗೆ ಅವಮಾನಿಸಿ ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ್ದರಿಂದ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ ಅವರು ಅಪರಾಧಿಗೆ 3 ವರ್ಷ ಸಾದಾ ಶಿಕ್ಷೆ ಮತ್ತು 12,500 ರೂ ದಂಡ ವಿಧಿಸಿ ಆದೇಶಿಸಿದ್ದಾರೆ. ಚಿಂಚೋಳಿತಾಲೂಕಿನ ಯಂಪಳ್ಳಿ ಗ್ರಾಮದ ಗುರುಪಾದಪ್ಪ ಉರ್ಫ ಗುರುನಾಥ ಶಿವಶರಣಪ್ಪ ಬಿರಾದಾರ ಶಿಕ್ಷೆಗೊಳಗಾದ ವ್ಯಕ್ತಿ.
ಈತ 2022 ರ ಸೆ.10 ರಂದು ಅಪರಾತ್ರಿ ಹೊತ್ತು ಗ್ರಾಮದ ಮನೆಯೊಂದರ ಬಾಗಿಲು ಬಡಿದು ಮನೆಯಲ್ಲಿದ್ದ ಮಹಿಳೆ ಏಕೆ ಬಂದಿದ್ದೀಯಾ ? ಎಂದು ಪ್ರಶ್ನಿಸಿದ್ದಕ್ಕೆ ಆ ಮಹಿಳೆಯ ಸೀರೆ ಬಿಚ್ಚಿ,ನಗ್ನವಾಗಿಸಲು ಯತ್ನಿಸಿ ಅವಾಚ್ಯವಾಗಿ ಬೈಯ್ದು, ಜೀವ ಬೆದರಿಕೆ ಹಾಕಿದ್ದ.ಪ್ರಕರಣ ಚಿಂಚೋಳಿ ಠಾಣೆಯಲ್ಲಿ ದಾಖಲಾಗಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.