
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೪೦; ಸಮಾಜದ ಎಲ್ಲಾ ಸ್ಥರದ ಜನರಿಗೆ ಅನುಕೂಲವಾಗಲೆಂದು ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಲೆಂದು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗಾಗಲೇ ಮೂರು ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಗೃಹ ಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರುಮಹಿಳೆಯರ ಸ್ವಾವಲಂಬನೆಗಾಗಿ ದಿಟ್ಟ ಹೆಜ್ಜೆಯನ್ನಿಟ್ಟು ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲಗೊಂಡರೆ ಇಡೀ ಕುಟುಂಬ ಹಾಗೂ ಆ ಮೂಲಕ ದೇಶವೇ ಸಬಲಗೊಂಡಂತಾಗುತ್ತದೆ. ಕುಟುಂಬದ ದೈನಂದಿನ ಖರ್ಚು ವೆಚ್ಚಗಳು ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ಬರುವಂತಹ ಖರ್ಚುವೆಚ್ಚಗಳನ್ನು ನಿಭಾಯಿಸುವುದು ಮಹಿಳೆಯರಿಗೆ ಪ್ರತಿದಿನದ ಸವಾಲಾಗಿರುತ್ತದೆ. ಕುಟುಂಬದ ಕಷ್ಟದ ಕಾಲದಲ್ಲಿ ಕುಟುಂಬದ ಯಜಮಾನಿಯೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾಳೆ ಹಾಗೂ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಪುರುಷನಿಗೆ ಬೆಂಬಲ ನೀಡಿ ಆಧಾರ ಸ್ತಂಭವಾಗಿ ನಿಲ್ಲುತ್ತಾಳೆ. ಇಂತಹ ಯಜಮಾನಿಗೆ ಗೌರವವನ್ನು ಸೂಚಿಸಿ ಆಕೆಯನ್ನು ಅರ್ಥಿಕವಾಗಿ ಸಬಲಳನ್ನಾಗಿ ಮಾಡಲು ಕರ್ನಾಟಕ ಸರ್ಕಾರವು ಪ್ರತಿ ತಿಂಗಳು 2000ರೂಪಾಯಿಗಳನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮುಖಾಂತರ ಜಮೆ ಮಾಡುವ ದೇಶದಲ್ಲಿಯೇ ಅತ್ಯಂತ ವಿನೂತನವಾದ ಹಾಗೂ ವಿಶಿಷ್ಟವಾದ ಯೋಜನೆಯನ್ನು ಜಾರಿಗೆ ತಂದಿರುತ್ತದೆ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತ:” ಅಂದರೆ ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಮಹಿಳೆಯು ತಾಯಿ, ಅಕ್ಕ, ತಂಗಿ, ಪತ್ನಿ ಹೀಗೆ ಹಲವಾರು ರೂಪಗಳಲ್ಲಿ ಪ್ರೀತಿಯ ಧಾರೆಯನ್ನೆರೆಯುತ್ತಾಳೆ. ಅಲ್ಲದೆ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಾಳೆ. ಇಂಥಹ ಮಹಿಳೆಯರಿಗಾಗಿಯೇ ಗೃಹಲಕ್ಷ್ಮಿಯನ್ನು ಜಾರಿಗೆ ತರಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 324046 ಜನ ಮಹಿಳೆಯರಿಗೆ ರೂ.64.80,92,000-ಗಳನ್ನು ಜಮೆ ಮಾಡಲಾಗುತ್ತಿದೆ. ಇದೊಂದು ಅತ್ಯಂತ ಸಡಗರ ಮತ್ತು ಸಂಭ್ರಮದ ದಿನವಾಗಿದ್ದು, ಆವೀಸ್ಮರಣಿಯವಾಗಿದೆ ಎಂದರು
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅಭಿವೃದ್ಧಿ ಪರ್ವ ಪ್ರಾರಂಭ ಅಗಲಿದೆ. ಇಲ್ಲಿಯವರೆಗೆ ಭ್ರಷ್ಟಾಚಾರದ ಪರ್ವ ಇತ್ತು. ರಾಜ್ಯ ಚುನಾವಣಾ ಐದು ಗ್ಯಾರಂಟಿ ಜಾರಿ ಮಾಡದಿದ್ದರೆ ವಾರ್ಡ್ ನಲ್ಲಿ ಬಿಟ್ಟು ಕೊಳ್ಳಬೇಡಿ ಎಂದು ಮಲ್ಲಿಕಾರ್ಜುನ್ ಹೇಳಿದ್ದರು.ನಮ್ಮದು ನುಡಿದಂತೆ ನಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದಲ್ಲಿ ನ ಸರ್ಕಾರ.ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತಿದೆ. ಮುಂದೆ ಯುವನಿಧಿ ಯೋಜನೆಯಡಿ ಮೂರು ಸಾವಿರ ಬರುತ್ತದೆ. ಒಟ್ಟು ಎಂಟು ಸಾವಿರ ನೀಡಿದಂತಾಗುತ್ತದೆ ಎಂದು ತಿಳಿಸಿದರು.ಯೋಜನೆಯ ಹಣವನ್ನು ಯಾವುದೇ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮಾತನಾಡಿ ರಾಜ್ಯದಲ್ಲಿ ಸುರ್ವರ್ಣಾಕ್ಷರದಲ್ಲಿ ಬರೆದಿಡುವ ದಿನ ಇದಾಗಿದೆ.ಎಲ್ಲರಿಗೂ ಸಮಪಾಲು ಸಮಬಾಳು ಎಂಬ ಧ್ಯೇಯೋದ್ದೇಶದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಶಕ್ತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರ್ಭದಿಂದ ಮರಣದವರೆಗೂ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ.ಪ್ರೀತಿ ವಾತ್ಸಲ್ಯ ನೀಡುವ ಮಹಿಳೆ ಒಂದಲ್ಲಾ ಒಂದು ರೀತಿ ಶೋಷಣೆಗೆ ಒಳಗಾಗಿದ್ದಾರೆ ಅವರಿಗೆ ಶಕ್ತಿ ನೀಡುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದರುಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವತೆಗಳಿರುತ್ತಾರೆ. ಸಂಸಾರ ಚೆನ್ನಾಗಿರಬೇಕಾದರೆ ಗೃಹಲಕ್ಷ್ಮೀಯರು ಚೆನ್ನಾಗಿರಬೇಕು.ಮಹಿಳೆಯರುಹಿಂದಿನಿಂದಲೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಸ್ತ್ರೀ
ತ್ಯಾಗಮಯಿ ಅಷ್ಟೇ ಅಲ್ಲ ಆರ್ಥಿಕವಾಗಿಯೂ ಸ್ವಾವಲಂಬನೆಯಾಗಬೇಕು ಈ ಯೋಜನೆಯ ಅನುಕೂಲ ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ನೀವು ಸಬಲರಾಗಬೇಕು ಅಭಿವೃದ್ಧಿಯಾಗಬೇಕು ಉತ್ತಮ ಯೋಜನೆ ಇದಾಗಿದೆ.ಪೋಲೀಸ್ ಇಲಾಖೆ ಸದಾ ನಿಮ್ಮೊಂದಿಗೆ ಇದೆ ಎಂದರು.ವೇದಿಕೆಯಲ್ಲಿ ಜಿ.ಪಂ ಸಿಇಒ ಸುರೇಶ್ ಇಟ್ನಾಳ್,ಮೇಯರ್ ವಿನಾಯಕ ಪೈಲ್ವಾನ್,ಎಸಿ ದುರ್ಗಾಶ್ರೀ,ಎಸ್ಪಿ ಉಮಾ ಪ್ರಶಾಂತ್ ,
ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ ಚಮನ್ ಸಾಬ್,ಶಾಮನೂರು ಬಸವರಾಜ್,ಎನ್ ಜಿ ಪುಟ್ಟಸ್ವಾಮಿ ಮತ್ತಿತರರಿದ್ದರು.ಪಾಲಿಕೆ ಆಯುಕ್ತೆ ರೇಣುಕಾ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ ನಿರೂಪಿಸಿದರು.