ಮಹಿಳಾ ಸ್ವಹಾಯ ಸಂಘಗಳ ಒಕ್ಕೂಟದಿಂದ ತ್ಯಾಜ್ಯ ನಿರ್ವಹಣೆ

ಗದಗ, ಮಾ.26: ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಭಾರತ ಯೋಜನೆಯ ತ್ಯಾಜ್ಯ ನಿರ್ವಹಣಾ ಕಾರ್ಯವನ್ನು ಪಂಚಾಯತಿ ಮಟ್ಟದ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ನಿರ್ವಹಿಸಲು ಚಾಲನೆ ನೀಡಲಾಗಿದೆ ಎಂದು ರೋಣ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಗ್ರಾಮ ಪಂಚಾಯತ ಹಾಗೂ ಸ್ವಚ್ಛ ಭಾರತ ಮಿಷನ್ ಸಹಯೋಗದಲ್ಲಿ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮ ಪಂಚಾಯತನಲ್ಲಿ ತ್ಯಾಜ್ಯ ನಿರ್ವಹಣೆ ವಾಹನವನ್ನು ಪಂಚಾಯತ ಮಟ್ಟದ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟಕ್ಕೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು.
ಸರ್ಕಾರಿ ಯೋಜನೆಗಳ ಯಶಸ್ಸಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು ಈ ಹಿನ್ನೆಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ವತಿಯಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಹೊಳೆ ಆಲೂರ ಗ್ರಾಮ ಪಂಚಾಯತಗೆ ವಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು ಇದರ ಸಾಧಕ ಬಾಧಕಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ವಿಸ್ತರಿಸಲಾಗುವದು ಎಂದರು.
ಗ್ರಾಮ ಪಂಚಾಯತನಿಂದ ಕಸ ವಿಲೇವಾರಿಗೆ ಇರುವ ವಾಹನಗಳನ್ನು ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದೊಂದಿಗೆ ಕಸ ವಿಲೇವಾರಿ ಕೈಗೊಳ್ಳಲಾಗುತ್ತಿದ್ದು ಪ್ರತಿ ಮನೆ ಹಾಗೂ ಅಂಗಡಿಗಳಿಂದ ಗ್ರಾಮ ಪಂಚಾಯತ ನಿಗದಿಪಡಿಸುವ ಕನಿಷ್ಠ ಸೇವಾ ಶುಲ್ಕವನ್ನು ಸಂಗ್ರಹಿಸಿ ನಿರ್ವಹಣಾ ವೆಚ್ಚವನ್ನು ಭರಿಸಲಾಗುವದು. ಈ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿಯ ಚುನಾಯಿತ ಜನಪ್ರತಿನಿಧಿಗಳು ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೊಳೆ ಆಲೂರ ಗ್ರಾಮ ಪಂಚಾಯತ ಅಧ್ಯಕ್ಷ ಸಂಗಪ್ಪ ಬ.ದುಗಳದ, ಉಪಾದ್ಯಕ್ಷೆ ರೇಣುಕಾ.ಕ.ತೆಗ್ಗಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ ಬ್ಯಾಡಗಿ, ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಸ್ವಚ್ಛ ಭಾರತ ಮಿಷನ್ ಜಿಲ್ಲಾ ಶಿಕ್ಷಣ ಸಮಾಲೋಚಕ ಸುರೇಶ ಕಪ್ಪತ್ತನವರ ಉಪಸ್ಥಿತರಿದ್ದರು.