
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.9 :- ತೆರೆಮೆರೆಯ ತಮ್ಮ ಜೀವನದ ಹಾದಿಯಲ್ಲಿ ಕಂಡುಕಾಣದೆ ಮಹಿಳೆಯರು ಮಾಡುವ ಸಾಧನೆಗಳು ಮುಂದಿನ ಪೀಳಿಗೆಯವರಿಗೆ ಮಾದರಿಯಾಗಿದ್ದು ಅಂತಹ ಮಹಿಳಾ ಸಾಧಕರನ್ನು ಗುರುತಿಸಿ ಮಹಿಳಾ ದಿನಾಚರಣೆಯ ಶುಭಸಂದರ್ಭದಲ್ಲಿ ಅವರ ಮನೆಗೆ ತೆರಳಿ ಸನ್ಮಾನಿಸಿ ಅವರ ಆಶೀರ್ವಾದ ಪಡೆಯುವುದೇ ನಮ್ಮ ಹೆಮ್ಮೆ ಎಂದು ಡಾ.ಎನ್ ಟಿ ಶ್ರೀನಿವಾಸ, ಎನ್ ಟಿ ತಮ್ಮಣ್ಣ ತಿಳಿಸಿದರು.
ಅವರು ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ನರಸಿಂಹಗಿರಿ ಗ್ರಾಮದಲ್ಲಿ ಸೀಮಂತ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಸೀಮಂತ ಕಾರ್ಯ ನೆರವೇರಿಸಿ ನಂತರ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿ ಪಟ್ಟಣದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ಸಾಧನೆಗೈದ ಮಹಿಳೆಯರು, ಸೂಲಗಿತ್ತಿ ಮಹಿಳೆಯರು, ಶಿಕ್ಷಣ ರಂಗದಲ್ಲಿ ಸಾಧನೆ ಮಾಡಿದ ನಿವೃತ್ತ ಮಹಿಳಾ ಗುರುಗಳು, ರಾಜಕೀಯ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರು, ರಂಗಕಲಾವಿದರು, ಎರಡು ಕೈಗಳಿಲ್ಲದಿದ್ದರೂ ಕಾಲಿನ ಮೂಲಕ ಓದು ಬರಹ ಕಲಿತು ತಾನು ಶಿಕ್ಷಕಿಯಾಗಿ ನೂರಾರು ಮಕ್ಕಳಿಗೆ ಪಾಠ ಮಾಡುವ ಸಾಧಕಿ ಹಾಗೂ ಇತರೆ ಕ್ಷೇತ್ರದಲ್ಲಿ ಶ್ರಮಿಸಿದ ಮಹಿಳಾ ಸಾಧಕರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಅವರನ್ನು ಸನ್ಮಾನಿಸಿದ ಕ್ಷಣ ಅವರ ಆಶೀರ್ವಾದ ನಮಗೆಲ್ಲಾ ಮಾರ್ಗದರ್ಶನವಾಗಿದೆ ಎಂದು ಸಹೋದರರಿಬ್ಬರು ತಿಳಿಸಿದರು. ಈ ಸಂದರ್ಭದಲ್ಲಿ ಡಾ ಶ್ರೀನಿವಾಸ ಅಭಿಮಾನಿ ಬಳಗದವರು ಅವರ ಜೊತೆಯಲ್ಲಿದ್ದರು.