ಮಹಿಳಾ ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತರಿಗೆ ಮರಣದಂಡನೆ: ಇರಾನ್ ವಿರುದ್ಧ ಫ್ರಾನ್ಸ್ ಆಕ್ರೋಶ

ಪ್ಯಾರಿಸ್, ಸೆ.೮- ಸಲಿಂಗಿ ಹಕ್ಕುಗಳ ಪರ ಹೋರಾಟ ನಡೆಸುತ್ತಿದ್ದ ಇಬ್ಬರು ಮಹಿಳಾ ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಇರಾನ್ ವಿರುದ್ಧ ಫ್ರಾನ್ಸ್ ಖಂಡನೆ ವ್ಯಕ್ತಪಡಿಸಿದೆ.
ಝಾಹ್ರಾ ಸಿದ್ದೀಘಿ ಹಮ್ದಾನಿ (೩೧) ಹಾಗೂ ಎಲ್ಹಾಮ್ ಚುಬ್ದಾರ್ (೨೪) ಮರಣದಂಡನೆ ಶಿಕ್ಷೆಗೆ ಗುರಿಯಾದ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಇವರು ಸಲಿಂಗಕಾಮಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇರಾನ್‌ನ ವಾಯುವ್ಯ ಪಟ್ಟಣವಾದ ಉರ್ಮಿಯಾ ನ್ಯಾಯಾಲಯದಿಂದ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ವಿಧಿಸಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಹೆಂಗಾವ್ ಕುರ್ದಿಶ್ ಹಕ್ಕುಗಳ ಸಂಘಟನೆ, ಅವರು ಭೂಮಿಯಲ್ಲಿ ಭ್ರಷ್ಟಾಚಾರ ಹರಡುತ್ತಿದ್ದು, ಅಲ್ಲದೆ ದೇಶದ ಷರಿಯಾ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಸದ್ಯ ಈ ಆದೇಶದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದ್ದು, ಹಲವು ಸಂಘಟನೆಗಳು ಶಿಕ್ಷೆಯನ್ನು ಖಂಡಿಸಿದೆ. ಇಲ್ಹಾಮ್ ಚುಬ್ದಾರ್ ಮತ್ತು ಝಾಹ್ರಾ ಸಿದ್ದೀಘಿ ಹಮ್ದಾನಿ ಅವರಿಗೆ ಇರಾನ್ ನೀಡಿದ ಮರಣದಂಡನೆಯನ್ನು ನಾವು ಖಂಡಿಸುತ್ತದೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ಸದ್ಯ ಇರಾನ್‌ನಲ್ಲಿ ಸಲಿಂಗಕಾಮದ ವಿರುದ್ಧ ನೀಡಲಾದ ಅತ್ಯಂತ ಕಠಿಣ ಸಜೆ ಎಂದೇ ಹೇಳಲಾಗಿದೆ. ಹಿಂದೆ ಈ ರೀತಿಯ ಶಿಕ್ಷೆ ವಿಧಿಸಲಾಗಿರಲಿಲ್ಲ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಈಗಾಗಲೇ ಸಲಿಂಗಕಾಮವನ್ನು ಇರಾನ್‌ನಲ್ಲಿ ನಿಷೇಧಿಸಲಾಗಿದೆ. ಒಂದು ಅದರಲ್ಲಿ ತೊಡಗಿದ್ದರೆ ಪುರುಷ-ಮಹಿಳೆಯರ ವಿರುದ್ಧ ಕಠಿಣ ಕ್ರಮ ವಹಿಸಲಾಗುತ್ತಿದೆ.