ಮಹಿಳಾ ಸಬಲೀಕರಣ ಹಾಗೂ ಒಳಗೊಳ್ಳುವಿಕೆ ಸಿದ್ಧಾಂತದ ಮೂಲಕ ಮಾನವ ಅಭಿವೃದ್ಧಿ ಸಾಧ್ಯ : ಪ್ರೊ. ಆರ್. ಆರ್. ಬಿರಾದಾರ

ಕಲಬುರಗಿ,ಆ.26: ‘ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮಹಿಳಾ ಸಬಲೀಕರಣ ಹಾಗೂ ಸಮಾಜದ ಎಲ್ಲಾ ಸಮುದಾಯಗಳನ್ನು ಆರ್ಥಿಕ ಚಟುವಟಿಕೆಯ ಕಾರ್ಯಕ್ರಮಗಳಲ್ಲಿ ಒಳಗೊಳ್ಳುವ ಮೂಲಕ ಮಾತ್ರ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಯಶಸ್ಸನ್ನು ಕಾಣಬಹುದು” ಎಂಬುದಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಆರ್. ಆರ್. ಬಿರಾದಾರ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ, ಕನ್ನಡ ವಿಭಾಗವು ಹಮ್ಮಿಕೊಂಡಿದ್ದ “ಅಂತರ್‍ಶಿಸ್ತೀಯ ಹಾಗೂ ಬಹುಶಿಸ್ತೀಯ ಸಂಶೋಧನಾತ್ಮಕ ಕನ್ನಡ ಉಪನ್ಯಾಸ ಸರಣಿ” ಕಾರ್ಯಕ್ರಮವನ್ನು ಉದ್ಘಾಟಿಸಿ, “ಕಲ್ಯಾಣ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ : ಸಾಧನೆ ಮತ್ತು ಸವಾಲುಗಳು” ಎಂಬ ವಿಷಯ ಕುರಿತು ಮೊದಲ ಉಪನ್ಯಾಸ ನೀಡಿದ ಅವರು, ಆರ್ಥಿಕ ಮತ್ತು ಮಾನವ ಅಭಿವೃದ್ಧಿ ಎಂದರೇನು? ಮಾನವ ಅಭಿವೃದ್ಧಿಯನ್ನು ಅಳೆಯುವ ಮಾನದಂಡಗಳು ಯಾವುವು? ಕಲ್ಯಾಣ ಕರ್ನಾಟಕ ಭಾಗದ ಮಾನವ ಅಭಿವೃದ್ಧಿಯ ಮುಂದಿರುವ ಸವಾಲು ಹಾಗೂ ಸಾಧ್ಯತೆಗಳೇನು? ಎಂಬ ವಿಷಯವನ್ನು ಕುರಿತು ಅಂಕಿಅಂಶಗಳ ಮೂಲಕ ಮೌಲಿಕವಾದ ಪ್ರಬಂಧವನ್ನು ಮಂಡಿಸಿದರು.

1950ರ ದಶಕದಿಂದ ಈವರೆಗಿನ ಭಾರತದ ಆರ್ಥಿಕ ಹಾಗೂ ಮಾನವ ಅಭಿವೃದ್ಧಿಯ ನಡಿಗೆಯನ್ನು ವಿಶ್ಲೇಷಿಸಿದ ಪ್ರೊ. ಬಿರಾದಾರ ಅವರು “ಆರ್ಥಿಕ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ, ಮಾನವ ಅಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಒಳಗೊಳ್ಳುವಿಕೆಯ ಪ್ರಕ್ರಿಯೆಯಿಂದ ಮಾತ್ರ ಸುಸ್ಥಿರ ಮಾನವ ಅಭಿವೃದ್ಧಿ ಸಾಧ್ಯ. ಒಂದು ದೇಶದ ಜನರ ಸುದೀರ್ಘ, ಆರೋಗ್ಯ ಜೀವನ; ಆರ್ಥಿಕ, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳಲು ಬೇಕಾದ ಕೌಶಲ್ಯ, ಜ್ಞಾನದ ಮಟ್ಟ ಹಾಗೂ ಗೌರವಯುತವಾದ ಸಾಮಾಜಿಕ ಜೀವನ ಮಟ್ಟದ ಸ್ವರೂಪವನ್ನು ಮಾನದಂಡವಾಗಿಸಿಕೊಂಡು ಮಾನವ ಅಭಿವೃದ್ಧಿಯನ್ನು ಅಳೆಯಲಿಕ್ಕೆ ಸಾಧ್ಯ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಾನವ ಅಭಿವೃದ್ಧಿಯ ಪ್ರಮಾಣವು ಕುಂಟಿತವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಹಿನ್ನೆಲೆಯಲ್ಲಿ ಶೈಕ್ಷಣಿಕ, ಆರೋಗ್ಯ, ಉದ್ಯೋಗಿಕ ಪ್ರಗತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾತ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ ಕೋಡಗುಂಟಿಯವರು “ಕನ್ನಡ ವಿಭಾಗವು ಅಂತರ್‌ಶಿಸ್ತೀಯ ಮತ್ತು ಬಹುಶಿಸ್ತೀಯ ಸಂಶೋಧನಾತ್ಮಕ ಅಧ್ಯಯನ ವಿಧಾನಗಳ ಮೂಲಕ ಅನ್ಯ ಜ್ಞಾನಶಿಸ್ತುಗಳ ಸಂಶೋಧನೆಯ ವಿಧಾನಗಳನ್ನು ಕನ್ನಡ ಸಂಶೋಧನೆಯಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಉಪನ್ಯಾಸ ಸರಣಿಯನ್ನು ಪ್ರಾರಂಭಿಸುತ್ತಿರುವುದು ವಿಭಾಗಕ್ಕೆ ಮತ್ತು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದು ಇದು ಕನ್ನಡ ಜ್ಞಾನಕ್ಷೇತ್ರವನ್ನು ವಿಸ್ತರಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ” ಎಂದು ಹೇಳಿದರು. ಉಪನ್ಯಾಸದ ಬಳಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರೊ. ಆರ್‌ ಆರ್‌ ಬಿರಾದಾರ ಅವರೊಟ್ಟಿಗೆ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉಪನ್ಯಾಸವನ್ನು ಅರ್ಥಪೂರ್ಣವಾಗಿಸಿದರು.
ಪ್ರೊ. ಶಿವಗಂಗಾ ರುಮ್ಮ, ಡಾ. ಅಪ್ಪಗರೆ ಸೋಮಶೇಖರ್, ಡಾ. ಟಿ. ಡಿ. ರಾಜಣ್ಣ, ಡಾ. ವಿಜಯಕುಮಾರ ಹೆಚ್‌, ಡಾ. ಕಿರಣ್ ಗಾಜನೂರು, ಡಾ, ರಾಜಶ್ರೀ, ಡಾ. ಸುಮಾಸ್ಕಾರಿಯ, ಡಾ. ಬಸವರಾಜ್ ಸೋಮನಮರಡಿ, ಡಾ. ಸಂದೀಪ್, ಡಾ. ರೋಹಿಣಾಕ್ಷ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಶೋಧಕರಾದ ಗದ್ದೆಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.