ಮಹಿಳಾ ಸಬಲೀಕರಣ ಕುರಿತು ಜಾಗೃತಿ ಅಭಿಯಾನ

ಕೋಲಾರ,ನ,೧೬-ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಕಾನೂನಿನ ಮೂಲಕ ಎದುರಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ|| ಸಿ.ವಿ.ಸ್ನೇಹಾ ಹೇಳಿದರು.
ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾಡಳಿತ, ಕೋಲಾರ ಹಾಗೂ ರಾಜಾ ರಾಮ್ ಮೋಹನ್ ರಾಯ್ ಪ್ರತಿ?ನ ಕೊಲ್ಕತ್ತಾ ಇವರ ಸಹಯೋಗದೊಂದಿಗೆ ರಾಜಾರಾಮ್ ಮೋಹನ್‌ರಾಯ್ ಅವರ ೨೫೦ನೇ ಜನ್ಮವಾರ್ಷಿಕೋತ್ಸವದ ನೆನಪಿಗಾಗಿ ಮಹಿಳಾ ಸಬಲೀಕರಣ ಕುರಿತಾದ ಜಾಗೃತಿ ಮೂಡಿಸುವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಮಹಿಳೆಯರ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುವಂತಹ ಬದಲಾವಣೆ ಆಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಭೂಣ ಪತ್ತೆ ಪ್ರಕರಣಗಳ ತಡೆಗೆ ಸರಕಾರ ಕಠಿಣವಾದ ಕಾನೂನು ಜಾರಿಗೆ ತಂದಿದ್ದರೂ ಸಹ, ಕೆಲವೊಂದು ಸ್ಥಳಗಳಲ್ಲಿ ಭೂಣ ಲಿಂಗ ಪತ್ತೆಗಳು ನಡೆಯುತ್ತಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಎಚ್ಚರಿಸಿದರು.
ಸಮಾಜದಲ್ಲಿ ಹೆಣ್ಣು ಮಕ್ಕಳಲ್ಲಿ ಅಡಗಿರುವ ವಿವಿಧ ಕಲೆಗಳನ್ನು ಪೋಷಕರು ಗಮನಿಸಿ ಪ್ರೋತ್ಸಾಹಿಸಿದರೆ ವಿವಿಧ ರಂಗಳಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದರಲ್ಲದೆ, ಮಹಿಳಾ ಪ್ರತಿಭೆಗಳಲ್ಲಿ ಕಲೆ ಮತ್ತು ಕ್ರೀಡೆಗಳಲ್ಲಿ ಮುಂದೆ ಬಂದು ಸಮಾಜದಲ್ಲಿ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಬಹುದು. ಸ್ವಾವಲಂಬಿಯಾಗಿ ನಿಂತುಕೊಂಡರೆ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸ್ಥಾನಮಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್ ಮಾತನಾಡಿ, ನಗರಸಭೆಯ ಪೌರಕಾರ್ಮಿಕರು ಪ್ರತಿದಿನ ಮನೆ ಬಳಿ ಬಂದಾಗ ಮನೆಯಲ್ಲಿನ ಕಸವನ್ನು ಕಸದ ವಾಹನಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಜಿಲ್ಲೆಯ ಮಾಣಿಕ್ಯ ಅವರು ೨೩ನೇ ರಾಂಕ್ ಗಳಿಸಿದ್ದು ಇವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಹಾಗೂ ಉಪನ್ಯಾಸಕ ನಾಗಾನಂದ ಕೆಂಪರಾಜ್ ಮತ್ತು ಗಮನ ಮಹಿಳಾ ಸಮೂಹ ಒಕ್ಕೂಟದ ಶಾಂತಮ್ಮ ಅವರು ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಬಿ.ಎಸ್ ಸುಮಾ, ಜಿಲ್ಲಾ ಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಎಂ.ಸಿ.ನೇತ್ರಾವತಿ, ಪತ್ರಕರ್ತರು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಎಸ್.ಗಣೇಶ್, ಕವಿತಾ, ಅರುಣಾ, ನಾಗಮಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.