ಮಹಿಳಾ ಸಬಲೀಕರಣದಿಂದ ಕುಟುಂಬವೃದ್ಧಿ : ಸಿದ್ರಾಮ ಪಾರಾ

ಬೀದರ: ಜು.31:ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಯ ಕೈ ಬಲಪಡಿಸಿದರೆ ಇಡೀ ಕುಟುಂಬವೇ ವೃದ್ಧಿಯಾಗುತ್ತದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ. ಇಂದು ಡಿಸಿಸಿ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳ ಕ್ರಾಂತಿಯೇ ನಡೆದು ಹೋಗಿದೆ. ಇನ್ನೂ ನಡೆಯುತ್ತಿದೆ. ಪ್ರತೀ ವಾರ ಕೇವಲ 20 ರೂಪಾಯಿ ಸಂಗ್ರಹಿಸುವ ಮೂಲಕ ಇಂದು ಕೋಟ್ಯಾಂತರ ರೂಪಾಯಿಯಲ್ಲಿ ವ್ಯವಹಾರ ನಡೆಯುತ್ತಿದೆ. ಸಾಲ ಸೌಲಭ್ಯದ ಮೂಲಕ ಅದೆಷ್ಟೋ ಕುಟುಂಬಗಳು ಸಮೃದ್ಧಿಯಿಂದ ಬದುಕುತ್ತಿವೆ. ಹೀಗಾಗಿ ಇನ್ನೂ ಹೆಚ್ಚಿನ ಮಹಿಳಾ ಸಬಲೀಕರಣದ ಗುರಿಯನ್ನು ಹೊತ್ತುಕೊಂಡು ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ನುಡಿದರು.

ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಡಿಸಿಸಿ ಬ್ಯಾಂಕ್ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ವತಿಯಿಂದ ಆಯೋಜಿಸಿದ ಕ್ಷೇತ್ರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್.ಚೆಲುವಾ ಮಾತನಾಡಿ “ಮಹಿಳೆ ಎಂದಿಗೂ ಅಬಲೆಯಲ್ಲ. ಆಕೆ ಸಬಲೆ. ತನ್ನೊಳಗಿರುವ ಆಂತಃಶಕ್ತಿ ಜಾಗೃತಗೊಳಿಸಿ ಆಕೆಗೆ ಒಂದಿಷ್ಟು ಪ್ರೋತ್ಸಾಹ ನೀಡಿದರೆ ತನ್ನ ಕುಟುಂಬದ ಜೊತೆಗೆ ಇಡೀ ದೇಶವೇ ಆರ್ಥಿಕ ಸಬಲೀಕರಣಗೊಳಿಸುತ್ತಾಳೆ ಎಂದು ಮಹಿಳೆಯರ ಸ್ವಸಹಾಯ ಸಂಘಗಳ ಉತ್ತಮ ಕಾರ್ಯವನ್ನು ಕೊಂಡಾಡಿದರು.

ಇದೇ ವೇಳೆ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಹಂಗರಗಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜ್ಯೋತಿ ಎಸ್. ಕರ್ಪೂರ, ಸಹಾಯಕ ಪ್ರಾಧ್ಯಾಪಕರುಗಳಾದ ಪರಮೇಶ್ವರ, ಡಾ. ಸಿರಾಜ್, ಹಿಂದಿ ವಿಭಾಗದ ಮುಖ್ಯಸ್ಥೆ ಗೀತಾ ಪೋಸ್ತೆ, ಸಂಗೀತಾ ಮಾನಾ, ಇತಿಹಾಸ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಕುಂಬಾರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಪ್ರಯುಕ್ತ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಮಹಿಳೆಯರನ್ನು ಭೇಟಿ ನೀಡಿ, ಸ್ವಸಹಾಯ ಮಹಿಳಾ ಸಂಘಗಳ ಸ್ಥಾಪನೆ, ಸ್ವಸಹಾಯ ಸಂಘದ ಸದಸ್ಯರ ಹಣಕಾಸಿನ ಉಳಿತಾಯದೊಂದಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಸ್ತ್ರೀ ಸಬಲೀಕರಣದ ಮಾರ್ಗೋಪಾಯಗಳ ಬಗ್ಗೆ ಪ್ರತ್ಯಕ್ಷವಾಗಿ ಅರಿವು ಮೂಡಿಸಿದರು.