ಮಹಿಳಾ ಸಬಲೀಕರಣಕ್ಕೆ ಬಾಬಾಸಾಹೇಬರ ಕೊಡುಗೆ ಅನನ್ಯ

ಕಲಬುರಗಿ:ಎ.9: ಮಹಿಳಾ ಸಬಲೀಕರಣಕ್ಕೆ ಬಾಬಾಸಾಹೇಬರ ಚಿಂತನೆ ಕುರಿತು ಮಾತನಾಡಿದ ಹಿರಿಯ ಲೇಖಕಿ ಡಾ. ಇಂದುಮತಿ ಪಾಟೀಲ, ಪ್ರಸ್ತುತ ದೇಶದ ಮಹಿಳೆಯರು ಅನುಭವಿಸುತ್ತಿರುವ ಹಕ್ಕು ಮತ್ತು ಅಧಿಕಾರಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಮೂಲ ಕಾರಣ. ಅಂದಿನ ದಿನಗಳಲ್ಲಿ ಬಾಲ್ಯ ವಿವಾಹ, ದೇವದಾಸಿ, ಸತಿ ಸಹಗಮನ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ದಿಟ್ಟತನದ ಹೋರಾಟ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಮುಖ್ಯ ಕಾರಣರಾದರು. ಸಂವಿಧಾನದಲ್ಲಿ ಮಹಿಳೆಯರಿಗೆ ಅನೇಕ ಹಕ್ಕುಗಳನ್ನು ನೀಡುವ ಮೂಲಕ ಅವರಲ್ಲಿ ಬಹು ದೊಡ್ಡ ಬಲ ತುಂಬಿದರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಎಕೆಆರ್ ದೇವಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಭೀಮ ಸಂಗಮ ಎಂಬ ಡಾ. ಬಿ.ಆರ್.ಅಂಬೇಡ್ಕರ್ ರವರ ಚಿಂತನಾ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜ ಸ್ವಾಸ್ಥ್ಯಕ್ಕೆ ಸಂವಿಧಾನದ ಕೊಡುಗೆ ಕುರಿತು ಮಾತನಾಡಿದ ಪ್ರಗತಿಪರ ಚಿಂತಕ ಡಾ. ಐ ಎಸ್ ವಿದ್ಯಾಸಾಗರ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಶಾಂತಿ ಸುಗಮವಾಗಿ ಭಾರತ ಮುನ್ನಡೆಯುತ್ತಿದೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿಕೊಟ್ಟಿರುವ ಸಂವಿಧಾನದ ಶ್ರೇಷ್ಠತೆಯೇ ಕಾರಣ. ಈ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ,. ಸಮಾನತೆ, ಶೈಕ್ಷಣಿಕ, ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದೆ. ಶೋಷಣೆ ವಿರುದ್ಧ ಹೋರಾಡುವ ಹಕ್ಕನ್ನು ಒದಗಿಸಿಕೊಟ್ಟಿದ್ದು, ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯದಂತೆ ನಾವೆಲ್ಲರೂ ಒಂದಾಗಿ ಜೊತೆಗೂಡಿ ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮನೋಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನವೇ ನಮ್ಮೆಲ್ಲರ ನಿಜವಾದ ಧರ್ಮವಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ನಿಜವಾದ ಸಮಾನತೆ ತರಲು ಸಾಧ್ಯ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಪರಿಷತ್ತು ಮಹಾತ್ಮರು ತೋರಿದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಡಾ. ಸುರೇಶ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು.
ಎಕೆಆರ್ ದೇವಿ ಪದವಿಪೂರ್ವ ಕಾಲೇಜಿನ ವ್ಯವಸ್ಥಾಪಕ ಎಂ.ವಿ.ಎಸ್. ಸುಬ್ರಹ್ಮಣ್ಯಂ ನೇತೃತ್ವ ವಹಿಸಿದ್ದರು. ಹಿರಿಯ ಪತ್ರಕರ್ತ ಶಂಕರ ಕೋಡ್ಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ಬಾಬುರಾವ ಜಮಾದಾರ ಮಾತನಾಡಿದರು. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ರಾಜೇಂದ್ರ ಮಾಡಬೂಳ, ಶರಣಬಸಪ್ಪ ನರೂಣಿ, ಶಿಲ್ಪಾ ಜೋಶಿ, ಕಲ್ಯಾಣಕುಮಾರ ಶೀಲವಂತ, ಸಂತೋಷ ಕುಡಳ್ಳಿ, ಎಸ್.ಎಂ.ಪಟ್ಟಣಕರ್, ಹನುಮಂತರೆಡ್ಡಿ, ಶಕುಂತಲಾ ಪಾಟೀಲ, ಲತಾ ಬಿಲಗುಂದಿ, ವಿಶ್ವನಾಥ ತೊಟ್ನಳ್ಳಿ, ಸೋಮಶೇಖರಯ್ಯಾ ಹೊಸಮಠ, ಪ್ರಭುಲಿಂಗ ಮೂಲಗೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಹಿರಿಯರಾದ ಲಕ್ಷ್ಮಣರಾವ ಕಡಬೂರ, ಖಾಜಿ ರಿಜ್ವಾನ್ ಉರ್ ರಹಮಾನ್ ಸಿದ್ದೀಕಿ ಮಶೂದ್, ಪದ್ಮಾವತಿ ಎನ್ ಮಾಲಿಪಾಟೀಲ, ಡಾ. ಸಂಧ್ಯಾ ಕಾನೇಕರ್, ಸುಭಾಷó ಆಲೂರ ಅವರನ್ನು `ಭೀಮ ಜ್ಯೋತಿ’ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಸಂಗೀತ ಕಲಾವಿದ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಸಂಗಡಿಗರಿಂದ ಭೀಮ ಗೀತೆಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದರು.
ಗಮನ ಸೆಳೆದ ಸಮಾನತೆಯ ಕವಿತೆ ಕವಿಗೋಷ್ಠಿ: ನಂತರ ನಡೆದ ಸಮಾನತೆಯ ಕವಿತೆಯ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಾದ ಭೀಮರಾಯ ಹೇಮನೂರ, ಡಾ. ಕೆ.ಗಿರಿಮಲ್ಲ, ಧರ್ಮಣ್ಣಾ ಹೆಚ್ ಧನ್ನಿ, ಡಾ. ರಾಜಶೇಖರ ಮಾಂಗ್, ನಾಗೇಂದ್ರಪ್ಪ ಮಾಡ್ಯಾಳೆ, ಹಣಮಂತರಾವ ಘಂಟೇಕರ್, ಸುವರ್ಣಾ ಹೂಗಾರ, ಭಾಗ್ಯಶಿಲ್ಪಾ ಆಲೇಗಾಂವ, ಬಿ.ಶಿವಶಂಕರ, ಹೆಚ್.ಎಸ್.ಬರಗಾಲಿ ಸೇರಿದಂತೆ ಅನೇಕ ಕವಿಗಳು ಸಮತೆಯ ಪ್ರಜ್ಞೆಯನ್ನು ಹೊಂದಿರುವ ಕವಿತೆಗಳನ್ನು ವಾಚಿಸಿ ಸಭೀಕರ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ-ಪತ್ರಕರ್ತ ಡಾ| ಶಿವರಂಜನ್ ಸತ್ಯಂಪೇಟೆ, ಡಾ. ಬಿ.ಆರ್ ಅಂಬೇಡ್ಕರ್ ಅಂದಾಕ್ಷಣ ಕೇವಲ ಸಂವಿಧಾನ ಮತ್ತು ದಲಿತರಿಗೆ ಮೀಸಲಾತಿ ನೆನಪಾಗುವುದಿಲ್ಲ. ಅಪ್ಪಟ ಆದರ್ಶ ಮನುಷ್ಯರೊಬ್ಬರು ಎದುರು ಬಂದು ನಿಂತಂತಾಗುತ್ತದೆ. ತಮ್ಮ ಕಾಲಮಾನವನ್ನು ಮೆಟ್ಟಿ ನಿಂತು ಗೋಪುರೋಪುರವಾಗಿ ಬೆಳೆದು ನಿಂತ ಅವರು ರಾಷ್ಟ್ರೀಯತಾವಾದಿಯಾಗಿ ಅಪ್ರತಿಮ ಚಿಂತಕರಾಗಿ, ಕಾನೂನು ತಜ್ಞರಾಗಿ, ರಾಜಕೀಯ ನೇತರರಾಗಿ ಸಂವಿಧಾನಶಿಲ್ಪಿಯಾಗಿ ಕಂಡುಬರುತ್ತಾರೆ. ಕವಿ-ಸಾಹಿತಿ-ಬರಹಗಾರರಿಗೆ ಸಾಮಾಜಿಕ ಜವಾಬ್ದಾರಿ ಹಾಗೂ ಬರವಣಿಗೆಯಲ್ಲಿ ಬದ್ಧತೆ ಇರಬೇಕು. ಕವಿಗಳಾದವರು ಸೃಜನಶೀಲರಾಗಿರುವುದರ ಜತೆಗೆ ಮಾನವೀಯ ಮೌಲ್ಯವುಳ್ಳವರಾಗಿರಬೇಕು ಎಂದು ಮಾರ್ಮಿಕವಾಗಿ ಹೇಳಿದರು.