ಮಹಿಳಾ ಸಬಲೀಕರಣಕ್ಕೆ ನಾಂದಿ“ಶಿಕ್ಷಣ”

ಚಿತ್ರದುರ್ಗ.ನ.೧೬; ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.ನಗರದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ  ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ, ಕೋಲ್ಕತಾ ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಆಧುನಿಕ ಭಾರತದ ಪಿತಾಮಹ ರಾಜಾ ರಾಮ್‍ಮೋಹನ್ ರಾಯ್ ಅವರ 250ನೇ ಜನ್ಮ ವಾರ್ಷಿಕೋತ್ಸವ ನೆನಪಿಗಾಗಿ ಮಹಿಳಾ ಸಬಲೀಕರಣದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಿಳೆಯರನ್ನು ಗೌರವ, ಪೂಜೆ ಮಾಡುವುದರಿಂದ ಮಹಿಳಾ ಸಬಲೀಕರಣವಾಗುವುದಿಲ್ಲ. ಅದರ ಬದಲಾಗಿ ಮಹಿಳೆಯರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯವಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟಾಗ ಮಹಿಳಾ ಸಬಲೀಕರಣಕ್ಕೆ ನಾಂದಿ ಆಗಲಿದೆ. ಮಹಿಳೆಯರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಹಾಗೂ ದೇಶದ ಸಂಸ್ಕøತಿಯೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.33ರಷ್ಟು ಮೀಸಲಾತಿ ನೀಡಿರುವುದರಿಂದ ಬಹಳಷ್ಟು ಮಹಿಳೆಯರು ಸರ್ಕಾರಿ ನೌಕರರಾಗಿದ್ದಾರೆ ಎಂದು ಹೇಳಿದರು.ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಪ್ರತಿಷ್ಠಾನಗಳು ಗ್ರಂಥಾಲಯಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿವೆ. ಗ್ರಂಥಾಲಯಗಳಲ್ಲಿರುವ ಪುಸ್ತಕಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯುವಂತಾಗಬೇಕು. ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತಹ ಪುಸ್ತಕಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಗ್ರಂಥಾಲಯ ಮಕ್ಕಳಿಗೆ ಆಕರ್ಷಿಣೀಯವಾಗಿರಬೇಕು ಎಂದು ಸಲಹೆ ನೀಡಿದರು.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆ.ಮಂಜುನಾಥ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಕೊಟ್ಟಿದ್ದಾರೆ. ಮಹಿಳಾ ಸಬಲೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಾಲೋಚನೆಯಿಂದ ಚಿಂತನೆ ಮಾಡಿ ಮಹಿಳೆಯರಿಗೆ ಶಿಕ್ಷಣ, ಆಸ್ತಿಯ ಹಕ್ಕುನ್ನು ಕಾನೂನಾತ್ಮಕವಾಗಿ ಕಲ್ಪಿಸಿಕೊಟ್ಟಿದ್ದಾರೆ ಎಂದರು.ಮಹಿಳೆಯರ ಶಿಕ್ಷಣ, ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ಕೋಲ್ಕತ್ತಾದ ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ವತಿಯಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯ, ಶಾಲಾ-ಕಾಲೇಜುಗಳ ಗ್ರಂಥಾಲಯ, ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ದೇಶದ ಎಲ್ಲಾ ಗ್ರಂಥಾಲಯಗಳಿಗೂ ಪೀಠೋಪಕರಣಗಳ ವ್ಯವಸ್ಥೆ, ಪುಸ್ತಕಗಳು, ಗ್ರಂಥಾಲಯಗಳ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸೌಕರ್ಯಗಳನ್ನು ಗ್ರಂಥಾಲಯಗಳಿಗೆ ನೀಡುತ್ತಿದೆ. ಜಿಲ್ಲೆಯಲ್ಲಿ ಸುಮಾರು 12ಕ್ಕೂ ಹೆಚ್ಚು ಗ್ರಂಥಾಲಯಗಳಿಗೂ ಕೊಡುಗೆ ನೀಡಿದ್ದು, ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಸಿ.ಬಿ.ಶೈಲಾ ಅವರು  ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ರಾಜಾರಾಮ್ ಮೋಹನ್ ರಾಯ್ ಅವರ 250ನೇ ಜನ್ಮ ದಿನದ ವಾರ್ಷಿಕೋತ್ಸವದ ನೆನಪಿಗಾಗಿ ನವೆಂಬರ್ 08, 09 ಹಾಗೂ 10ರಂದು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಾಸವಿ ಕನ್ನಡ, ಇಂಗ್ಲಿಷ್ ಪ್ರೌಢಶಾಲೆಯ ವಿದ್ಯಾರ್ಥಿ ಆರ್.ಕೆ.ಶಿಲ್ಪಶ್ರಿ ಪ್ರಥಮ ಬಹುಮಾನ ಪಡೆದರು. ಇದೇ ಶಾಲೆಯ ಜೆ. ಸುರಜ್ ದ್ವೀತಿಯ ಬಹುಮಾನ, ಆರ್.ಚಿನ್ಮಯಿ ತೃತೀಯ ಬಹುಮಾನ ಪಡೆದರು. ಕೆ.ಕೆ.ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಬಿ.ಚಂದು ಸಮಾಧಾನಕರ ಬಹುಮಾನ ಪಡೆದರು.