ಬಾದಾಮಿ,ಜೂ12: ರಾಜ್ಯಾದ್ಯಂತ ಮಹಿಳೆಯರಿಗೆ ಸಾಮಾನ್ಯ ಮತ್ತು ವೇಗದೂತ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಪಟ್ಟಣದ ಬಸ್ ಘಟಕದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ಇದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನುಡಿದಂತೆ ನಡೆದಿದ್ದೇವೆ. ಇದೊಂದು ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ. ಪ್ರತಿ ಬಡಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಸೇರಿದಂತೆ ಎಲ್ಲ ಮಹಿಳೆಯರಿಗೆ ಯೋಜನೆಯ ಲಾಭ ಸಿಗಲಿ. ಇದನ್ನು ಮಹಿಳೆಯರು ಸದುಪಯೋಗಪಡೆದುಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಯುವಮುಖಂಡ ಮಹೇಶ ಹೊಸಗೌಡ್ರ, ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ಗೌರಮ್ಮ ಬೇಲೂರಪ್ಪನ್ನವರ, ಮುಖಂಡರಾದ ಎಂ.ಡಿ.ಯಲಿಗಾರ, ಬಸವರಾಜ ಡೊಳ್ಳಿನ, ರಾಮಣ್ಣ ಡೊಳ್ಳಿನ, ಭೀಮಸಿ ಕಮ್ಮಾರ, ಶೈಲಾ ಪಾಟೀಲ, ಮಹಾಂತೇಶ ಹಟ್ಟಿ, ಪಿ.ಎಸ್.ಐ.ನಿಂಗಪ್ಪ ಪೂಜಾರ, ಘಟಕ ವ್ಯವಸ್ಥಾಪಕ ಕೆ.ಆರ್.ಚವ್ಹಾಣ, ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಮುಖಂಡರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಹಾಜರಿದ್ದರು. ಸದಾಶಿವ ಮರಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಬಾದಾಮಿಯಿಂದ ಬನಶಂಕರಿವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಅದೇ ಬಸ್‍ನಲ್ಲಿ ಬಾದಾಮಿಯಿಂದ ಬನಶಂಕರಿಗೆ ಪ್ರಯಾಣ ಬೆಳೆಸಿದರು. ಮಹಿಳೆಯರು ಸಂತಸ ವ್ಯಕ್ತಪಡಿಸಿದರು.