ಮಹಿಳಾ ಸದಸ್ಯರಿಗೆ ರಾಷ್ಟ್ರ ಧ್ವಜ ಹೊಲಿಯುವ ಅವಕಾಶ ದೊರೆತಿರುವುದು ಅದೃಷ್ಟ – ವಿಜಯ

ರಾಯಚೂರು.ಜು.24- ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ರಾಷ್ಟ್ರ ಧ್ವಜ ಹೊಲಿಯುವ ಅವಕಾಶ ದೊರೆತಿರುವುದು ಅದೃಷ್ಟ ಎಂದು ಜಿಲ್ಲಾ ಆರಸೇಟಿ ಸಂಸ್ಥೆಯ ನಿರ್ದೇಶಕ ವಿಜಯ ಕುಮಾರ್ ಅವರು ಹೇಳಿದರು.

ಇಂದು ನಗರದ ಆಶಾಪುರ ರಸ್ತೆಯಲ್ಲಿರುವ ಆರಸೇಟಿ ಕೇಂದ್ರದಲ್ಲಿ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ, ಜಿಲ್ಲಾ ಪಂಚಾಯತ್ ಹಾಗೂ ಆರಸೇಟಿ ಸಂಸ್ಥೆ ಇವರ ಸಹಯೋಗದಲ್ಲಿ  ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ರಾಷ್ಟ್ರಧ್ವಜ ತಯಾರಿಸುವ ತರಬೇತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರಕುವ ಯೋಜನೆಗಳನ್ನು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಎನ್.ಆರ್.ಎಲ್.ಎಮ್ ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್ ಅವರು ಮಾತನಾಡಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 11ರಿಂದ 17ರವರೆಗೆ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶದ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ರಾಷ್ಟ್ರಧ್ವಜ ಹೊಲಿದು ಸಿದ್ಧಪಡಿಸಬೇಕು ಎಂದರು.

ಜಿಲ್ಲೆಯಲ್ಲಿ 80 ಸಾವಿರದ 500 ನೂರು ರಾಷ್ಟ್ರ ಧ್ವಜಗಳು ಅವಶ್ಯಕತೆ ಇದೆ. ಪ್ರತಿ ಪಂಚಾಯತಿಗೆ 450 ಧ್ವಜಗಳನ್ನು ಪೂರೈಕೆ ಮಾಡಬೇಕು. ಆದ ಕಾರಣ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು ರಾಷ್ಟ್ರ ಧ್ವಜ ತಯಾರಿಸುವ ತರಬೇತಿ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕು. 16×24, 30×20ರ ಗಾತ್ರದಲ್ಲಿ ಹೊಲಿಯಬೇಕು ಎಂದು ತಿಳಿಸಿದರು. ಸಿಂಧನೂರು, ಸಿರವಾರ, ಮಸ್ಕಿ, ಮಾನವಿ, ರಾಯಚೂರು, ಲಿಂಗಸುಗೂರು, ದೇವದುರ್ಗ ತಾಲೂಕಿನಿಂದ 70 ಮಹಿಳಾ ಸದಸ್ಯರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಇಸ್ಮಾಯಿಲ್, ಟಿಪಿಎಂ ಶಿವರಾಜ, ವೀರಭದ್ರ, ನವೀನ್,  ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕ ಪ್ರಕಾಶ್, ಸೂರತ್, ಹೊನ್ನಮ್ಮ, ನಾಗರತ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.