ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡಿದ ಸಾವಿತ್ರಿಬಾಯಿ ಫುಲೆ

ಕಲಬುರಗಿ:ಜ.3: ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬ ಮಾತಿನ ಮಹತ್ವವನ್ನು ನೂರಾರು ವರ್ಷಗಳ ಹಿಂದೆಯೆ ಅರಿತ ಸಾವಿತ್ರಿಬಾಯಿ ಫುಲೆಯವರು, ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಕಾಲ ಕಳೆಯುವ ಸ್ಥಿತಿಯಲ್ಲಿ ಅವರನ್ನು ಹೊರಗಡೆ ಬರುವಂತೆ ಮಾಡಿ, ಮಹಿಳೆಯರಿಗೆ ಶಿಕ್ಷಣವನ್ನು ನೀಡುವ ಮೂಲಕ ದೇಶದ ಮೊದಲ ಶಿಕ್ಷಕಿಯಾಗಿ ಮಹಿಳಾ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಅವರು ನಾಂದಿ ಹಾಡಿದ ಮಹಾನ ಶಿಕ್ಷಕಿಯೆಂದು ಸುಜಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುನೀಲಕುಮಾರ ವಂಟಿ ಹೇಳಿದರು.

ಅವರು ನಗರದ ಜಗತ್ ಬಡಾವಣೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಪ್ರಾಥಮಿ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.

ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಸಮಾಜದಲ್ಲಿ ತುಂಬಿರುವ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಶೋಷಣೆಯಂತಹ ಮುಂತಾದ ಸಮಸ್ಯೆಗಳ ವಿರುದ್ಧ ಅವರು ತಮ್ಮ ಪತಿ ಮಹಾತ್ಮಜ್ಯೋತಿ ಬಾ ಫುಲೆ ಜೊತೆಗೊಡಿ ಜೀವನದುದ್ದಕ್ಕೂ ಹೋರಾಟ ಮಾಡಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾನ ವ್ಯಕ್ತಿಯಾಗಿದ್ದಾರೆ. ಸತ್ಯ ಶೋಧಕ ಸಮಾಜದ ಮೂಲಕ ಬಾಲ್ಯ ವಿವಾಹ, ವಿಧವೆಯರ ಶೋಷಣೆ ವಿರುದ್ಧ ಸಂಘಟಿತ ಹೋರಾಟ ಮಾಡಿದರು. ಶೋಷಿತ ಜನಾಂಗವು ಅನುಭವಿಸುತ್ತಿದ್ದ ಮೂಕ ರೋಧನೆಗೆ ಇವರು ಧ್ವನಿಯಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆಂದು ನುಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ಬಿ.ಪಾಟೀಲ, ಬಸವರಾಜ ಎಸ್.ಪುರಾಣೆ, ಮುಖ್ಯ ಶಿಕ್ಷಕರಾದ ದೇವೇಂದ್ರಪ್ಪ ಗಣಮುಖಿ, ವೀರಭದ್ರಪ್ಪ ಪಸಾರ್, ವಿಜಯಕುಮಾರ ಪೋಮಾಜಿ, ಎಸ್.ಎಸ್.ಹೂಗಾರ ಸೇರಿದಂತೆ ಮತ್ತಿತರರಿದ್ದರು.