ಮಹಿಳಾ ಶಕ್ತಿ ಹೋರಾಟಕ್ಕೆ ಬಹಳ ಮಹತ್ವವಿದೆ 

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೬;  ಎಲ್ಲಾ ಹೋರಾಟಗಳ ಪೈಕಿ ಮಹಿಳಾ ಶಕ್ತಿಯ ಹೋರಾಟ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮುಖಂಡರಾದ ಕಾಂ ಆನಂದರಾಜರವರು ಹೇಳಿದರು.ನಗರದ ಅಶೋಕ ರಸ್ತೆಯಲ್ಲಿರುವ ಕಾಂ ಪಂಪಾಪತಿ ಭವನದಲ್ಲಿ ಎನ್ ಎಫ್ ಐಡ್ಲ್ಯೂ ಅಖಿಲ ಭಾರತ ಮಹಿಳಾ ಒಕ್ಕೂಟದ ಜಿಲ್ಲಾ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡುತ್ತ ಮಹಿಳೆಯರ ಹೋರಾಟಕ್ಕೆ ಯಾವುದೇ ಸರ್ಕಾರಗಳು ಮಣಿಯುತ್ತವೆ ಎಂದರಲ್ಲದೆ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಮಹಿಳಾ ಸಂಘಟನೆ ಮುಂದಾಗಬೇಕು ಎಂದರು.ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮನ್ ಸಂಘಟನೆಯ ಜಿಲ್ಲಾ ಉಸ್ತುವಾರಿಗಳು ಮತ್ತು ಸಿಪಿಐ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ ಆವರಗೆರೆ ಚಂದ್ರು ಮಾತನಾಡಿ  ಮಹಿಳಾ ಸಂಘಟನೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಪುನರ್ ಸಂಘಟಿಸುವುದರೊಂದಿಗೆ ಸ್ಥಳೀಯ ಘಟಕಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರನ್ನು ಹೋರಾಟಕ್ಕೆ ಅಣಿನೇರಿಸಬೇಕೆಂದರಲ್ಲದೆ ಸಮಾಜದಲ್ಲಿ ನಡೆಯುವ ಅನಿಷ್ಟ ಪದ್ದತಿಗಳ ವಿರುದ್ಧ ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಮಾಡುವುದರ ಮೂಲಕ ದುರ್ಬಲ ಮಹಿಳೆಯರಿಗೆ ನೈತಿಕ ಬೆಂಬಲ ಕೊಡುವುದರೊಂದಿಗೆ ಶಕ್ತಿ ತುಂಬುವ ಕೆಲಸಮಾಡಬೇಕೆಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ಕಾಂ ಎಂ ಬಿ ಶಾರದಮ್ಮ ಮಾತನಾಡಿ ಮಹಿಳಾ ಸಂಘಟನೆಯನ್ನು ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿಸ್ತರಿಸುವುದರ ಮೂಲಕ ಮಹಿಳಾ ಸಂಘಟನೆಯನ್ನು ಬಲಪಡಿಸೋಣ ಎಂದರು.ಮಹಿಳಾ ಸಂಘಟನೆಯ ಸಂಘಟನಾ ಸಭೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿಗಳಾದ  ಹೆಚ್ ಜಿ ಉಮೇಶ್,  ಆವರಗೆರೆ ವಾಸು ಮತ್ತು ಮಹಿಳಾ ಮುಖಂಡರಾದ  ವಿಶಾಲಾಕ್ಷಿ ಮೃತ್ಯುಂಜಯ, ಎಸ್ ಎಸ್ ಮಲ್ಲಮ್ಮ, ಹೊನ್ನಾಳಿಯ  ಚನ್ನಮ್ಮ, ಜಗಳೂರು  ಸುಶೀಲಮ್ಮ, ಹೊನ್ನಾಳಿಯ  ಲಲಿತಮ್ಮ,  ನಿರ್ಮಲ, ರೇಣುಕಾ ,ಯುವಜನ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಎಂ.ತಿಪ್ಪೇಶ್ ಸೇರಿದಂತೆ ಮತ್ತಿತರರು ಮಾತನಾಡಿದರು. ಸಭೆ ಆರಂಭದಲ್ಲಿ ಇಪ್ಟಾ ಜಿಲ್ಲಾಧ್ಯಕ್ಷರಾದ ಕಾಂ ಐರಣಿ ಚಂದ್ರುರವರು ಮಹಿಳೆಯರ ಬದುಕಿನ ಕುರಿತು ಜಾಗೃತಿ ಗೀತೆ ಹಾಡಿದರು, ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು ಕೊನೆಯಲ್ಲಿ ಕಾಂ ಸರೋಜಾ ವಂದಿಸಿದರು .