ಆಕ್ಲೆಂಡ್ (ನ್ಯೂಜಿಲ್ಯಾಂಡ್), ಜು.೨೦- ಮಹಿಳಾ ವಿಶ್ವಕಪ್ ಫುಟ್ಬಾಲ್‌ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಪೊಲೀಸ್ ಸಿಬ್ಬಂದಿ ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ಆಕ್ಲೆಂಡ್ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಇನ್ನು ಫುಟ್ಬಾಲ್ ಟೂರ್ನಿಯ ಯೋಜನೆಯಂತೆ ನಡೆಯಲಿದೆ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ತಿಳಿಸಿದ್ದಾರೆ.
ಸ್ಥಳೀಯ ಸಮಯ ಸುಮಾರು ೭:೩೦ ಗಂಟೆಗೆ ಬಂದೂಕುಧಾರಿಯೊಬ್ಬ ಕೆಳ ಕ್ವೀನ್ ಸ್ಟ್ರೀಟ್‌ನಲ್ಲಿ ನಿರ್ಮಾಣ ಸ್ಥಳಕ್ಕೆ ಪ್ರವೇಶಿಸಿ, ಅಲ್ಲಿಂದ ಮುಖ್ಯ ರೈಲು ನಿಲ್ದಾಣ ಮತ್ತು ದೋಣಿ ಟರ್ಮಿನಲ್ ಬಳಿ, ಹಾಗೆಯೇ ಹೋಟೆಲ್‌ಗಳು ಮತ್ತು ಮಾಲ್ ಬಳಿ ತೆರಳಿದ್ದಾನೆ. ಇನ್ನು ಕಟ್ಟಡದ ಮೂಲಕ ಮೇಲಕ್ಕೆ ಹೋಗುತ್ತಿದ್ದಂತೆ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಪ್ಕಿನ್ಸ್, ಇದು ನಮಗೆ ಅತ್ಯಂತ ಕಠೋರವಾದ ಮುಂಜಾನೆಯಾಗಿದೆ. ನಾನು ಫಿಫಾ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯೋಜನೆಯಂತೆ ಫುಟ್ಬಾಲ್ ಪಂದ್ಯಗಳು ನಡೆಯಲಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಸದ್ಯ ಹೊಡೆದುರುಳಿಸಲಾಗಿದ್ದು, ಹೆಚ್ಚಿನ ಅವಘಡವನ್ನು ನಿಯಂತ್ರಿಸಲಾಗಿದೆ. ಹಾಗಾಗಿ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂಬುದು ಅಧಿಕಾರಿಗಳ ಮೌಲ್ಯಮಾಪನವಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಅಮೆರಿಕಾ ತಂಡ ತಂಗಿದ್ದು, ಇಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ಆದರೆ ಅವಘಡದಿಂದ ಅಮೆರಿಕಾ ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನಲಾಗಿದ್ದು, ಎಲ್ಲವೂ ಯೋಜಿಸಿದಂತೆ ಸಿದ್ಧತೆಗಳು ನಡೆಯುತ್ತಿದೆ ಎನ್ನಲಾಗಿದೆ. ಇನ್ನು ನ್ಯೂಜಿಲ್ಯಾಂಡ್ ಕಾಲಾಮಾನ ಗುರುವಾರ ರಾತ್ರಿ ನ್ಯೂಜಿಲ್ಯಾಂಡ್ ಹಾಗೂ ನಾರ್ವೆ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.