ಮಹಿಳಾ ವಿವಿ 20 ನೇ ಸಂಸ್ಥಾಪನಾ ದಿನಾಚರಣೆ

ವಿಜಯಪುರ:ಜೂ.22: ಎಂಜನಿಯರಿಂಗ್, ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‍ಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯುತ್ತಿರುವುದು ಹೆಚ್ಚುತ್ತಿದೆ. ಆದರೆ ಸ್ನಾತಕೋತ್ತರ ಹಾಗೂ ಸಂಶೋಧನಾ ಅಧ್ಯಯನಕ್ಕೆ ಸೇರುವ ಮಹಿಳೆಯರ ಸಂಖ್ಯೆ ಸಮಾಧಾನಕರವಾಗಿಲ್ಲ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವೈ.ಎಂ.ಜಯರಾಜ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿವಿಯ 20ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಸೈ ಎನ್ನಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆಲ್ಲ ಮಹಿಳೆಯರನ್ನು ಕರೆದುಕೊಂಡು ಬಂದು ಶಿಕ್ಷಣ ಕೊಡುವುದು ಒಂದು ದೊಡ್ಡ ಸವಾಲಾಗಿತ್ತು. ಆದರೆ ಇಂದು ಎಂಜನಿಯರಿಂಗ್ ಹಿಡಿದು ಶೈಕ್ಷಣಕ ಕ್ಷೇತ್ರದ ಎಲ್ಲ ಕಡೆಗಳಲ್ಲಿ ಮಹಿಳೆಯರೇ ಅತೀ ಹೆಚ್ಚಾಗಿ ಕಂಡು ಬರುತ್ತಿರುವುದು ಖುಷಿ ಮತ್ತು ಹೆಮ್ಮೆಯ ವಿಚಾರ ಎಂದರು.
ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಈ ಭಾಗದ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿದೆ. ಮತ್ತು ಸಂಶೋಧನೆ ಮತ್ತು ಮಹಿಳಾಪರ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಸಾಕಷ್ಟು ಬದಲಾವಣೆಯನ್ನು ತರುತ್ತಿದ್ದು ಮುಂಬರುವ ವರ್ಷಗಳಲ್ಲಿ ಮಹಿಳಾ ಶಿಕ್ಷಣದಲ್ಲಿ ದೇಶದ ಅತ್ಯುತ್ತಮ ಮಹಿಳಾ ವಿಶ್ವವಿದ್ಯಾನಿಲಯವಾಗಿ ರೂಪುಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದರು. .
ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುತ್ತ ಹೋದಂತೆ ಸಮಾಜದಲ್ಲಿ ಸಾಮಾಜಿಕ, ಸಾಂಸ್ಕøತಿಕ ಮತ್ತು ಔದ್ಯೋಗಿಕ ಕ್ರಾಂತಿಗೆ ಕಾರಣವಾಗುತ್ತದೆ. ಔದ್ಯೋಗಿಕ ಕ್ರಾಂತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗಿವೆ. ಆದರೆ ಸಮಾಜ ವಿಜ್ಞಾನ ನಿಕಾಯ ಮತ್ತು ಭಾಷಾ ನಿಕಾಯಗಳ ಅಧ್ಯಯನಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಆಗಿಲ್ಲ ಎಂದು ಅವರು ವಿಷಾದಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇವಲ 25 ವಿಶ್ವವಿದ್ಯಾನಿಲಯಗಳಿದ್ದವು. ಈಗ ದೇಶದಲ್ಲಿ ವಿಶ್ವವಿದ್ಯಾಲಯಗಳ ಗಣನೀಯವಾಗಿ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಕೇವಲ ಮೈಸೂರು ವಿಶ್ವವಿದ್ಯಾಲಯ ಮಾತ್ರ ಅಸ್ತಿತ್ವದಲ್ಲಿತ್ತು. ಆದರೆ ಇವತ್ತು ರಾಜ್ಯದಲ್ಲಿ 32 ಸರ್ಕಾರಿ ವಿಶ್ವವಿದ್ಯಾಲಯಗಳು, 26 ಖಾಸಗಿ ವಿಶ್ವವಿದ್ಯಾಲಯಗಳು ಮತ್ತು 8 ಡೀಮ್ಡ್ ವಿಶ್ವವಿದ್ಯಾಲಯಗಳು ಹೀಗೆ ಒಟ್ಟು 60ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಗುಣಮಟ್ಟ ಕುಸಿತವಾಗಿದ್ದು ಈ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಗತಿಸಿವೆ. ಆದರೆ ಇಲ್ಲಿಯವರೆಗೆ ಶೇಕಡ 26ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈ ಪ್ರಮಾಣವನ್ನು ಶೇಕಡ 50ಕ್ಕೆ ಹೆಚ್ಚಿಸಬೇಕಾದರೆ 50,000ಕ್ಕೂ ಹೆಚ್ಚು ಕಾಲೇಜುಗಳನ್ನು ಆರಂಭಿಸಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣ ಹೆಚ್ಚುತ್ತಿದ್ದು ಇದು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನು ಈ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ಎಷ್ಟು ಮುಖ್ಯವೋ ಪ್ರಾಧ್ಯಾಪಕರ ಪಾತ್ರ ಕೂಡ ಅಷ್ಟೇ ಮುಖ್ಯವಾಗಿದೆ. ಪ್ರಾಧ್ಯಾಪಕರು ಯಾವಾಗಲೂ ಕಲಿಕೆಯಲ್ಲಿ ಹೊಸತನವನ್ನು ತುಂಬಬೇಕು. ಕ್ರಿಯಾಶೀಲವಾಗಿರಬೇಕು. ವಿದ್ಯಾರ್ಥಿಗಳಲ್ಲಿರುವ ಹೊಸ-ಹೊಸ ಕೌಶಲ್ಯಗಳನ್ನು ಗುರುತಿಸುವ ಮೂಲಕ ಅವರನ್ನು ಬೆಳಕಿಗೆ ತರುವಂತಹ ಕೆಲಸ ಮಾಡಬೇಕು. ಪ್ರಾಧ್ಯಾಪಕರ ಮೇಲೆ ಮಹತ್ತರ ಜವಾಬ್ದಾರಿ ಇದೆ ಎಂದರು.
ವಿದ್ಯಾರ್ಥಿಗಳು ಸಹ ಅಷ್ಟೇ ಹೊಸ -ಹೊಸದನ್ನು ಕಲಿತು ಏನಾದರು ಸಾಧನೆ ಮಾಡಬೇಕು. ಹೆಣ್ಣು ಮಕ್ಕಳಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನೆಲ್ಲ ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದು ಪ್ರೊ.ಜಯರಾಜ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಯ ಕುಲಸಚಿವ ಪ್ರೊ.ಬಿ.ಎಸ್. ನಾವಿ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಏಕೈಕ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ. ಇಂತಹ ಸಮಯದಲ್ಲಿ ಸುಮಾರು 20 ವಸಂತಗಳ ಸಂಭ್ರಾಮಚರಣೆಯನ್ನು ಆಚರಿಸಿಕೊಳ್ಳುತ್ತಿರುವ ವಿಶ್ವವಿದ್ಯಾನಿಲಯದ ಬೆಳೆದು ಬಂದ ಹಾದಿಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯ ಎಂದರು.
ಇಂದು ಬೃಹತ್ ಹೆಮ್ಮರವಾಗಿ ಬೆಳೆದು ನಿಂತ ಈ ವಿಶ್ವವಿದ್ಯಾನಿಲಯದ ಹಿಂದೆ ಸಾಕಷ್ಟು ಜನ ಶ್ರಮಿಸಿದ್ದಾರೆ. ಅವರ ಪ್ರಯತ್ನದ ಫಲ ಇಂದು ನಮ್ಮ ವಿಶ್ವವಿದ್ಯಾನಿಲಯ ಇಷ್ಟು ಎತ್ತರಕ್ಕೆ ಏರಿದೆ. ಸಾವಿರಾರು ವಿದ್ಯಾರ್ಥಿಗಳು ಪ್ರತಿ ವರ್ಷ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ. ಇನ್ನೂ ಎತ್ತರಕ್ಕೆ ಈ ವಿಶ್ವವಿದ್ಯಾನಿಲಯವನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ಜವಾಬ್ದಾರಿಯನ್ನು ನಾವೆಲ್ಲರು ನಿಷ್ಠೆಯಿಂದ ಪಾಲಿಸೋಣ ಎಂದು ಹೇಳಿದರು.
ಅನಾರೋಗ್ಯದ ಕಾರಣಕ್ಕೆ ಸಮಾರಂಭಕ್ಕೆ ಗೈರು ಹಾಜರಾಗಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರ ಸಂದೇಶವನ್ನು ಇದೇ ಸಂದರ್ಭದಲ್ಲಿ ಕುಲಸಚಿವರು ವಾಚಿಸಿದರು.
ಸಮಾರಂಭದಲ್ಲಿ ಐಕ್ಯುಎಸಿ ನಿರ್ದೇಶಕ ಹಾಗೂ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ.ಜಿ.ತಡಸದ ಪ್ರ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ವಿಶ್ವವಿದ್ಯಾನಿಲಯ ಕಳೆದ 20 ವರ್ಷಗಳಲ್ಲಿ ನಡೆದು ಬಂದ ಹಾದಿಯ ಅವಲೋಕನ ಮಾಡಿದರು.
ಸಮಾರಂಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಚಂದ್ರಶೇಖರ ಎಚ್.ಎಂ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು, ಶಿಕ್ಷಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಉದಯ ಕುಲಕರ್ಣಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಸವಿತಾ ಹುಲಮನಿ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಶ್ವೇತಾ ಬೆಂಗಾರೆ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಹನುಮಂತಯ್ಯ ಪೂಜಾರಿ ನಿರೂಪಿಸಿದರು.