ಮಹಿಳಾ ಲೋಕೊ ಪೈಲೆಟ್ -ಮೋದಿ ಶ್ಲಾಘನೆ

ನವದೆಹಲಿ, ಮೇ ೩೦- ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ವಿರುದ್ಧ ಪ್ರತಿಯೊಬ್ಬರೂ ಹೋರಾಡುತ್ತಿದ್ದಾರೆ. ವೈದ್ಯರು, ದಾದಿಯರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆಕ್ಸಿಜನ್ ಕೊರತೆಯನ್ನು ನೀಗಿಸಲು ಭಾರತೀಯ ರೈಲ್ವೆ ಸಹಾಯದಿಂದ ದೇಶದ ಮೂಲೆ ಮೂಲೆಗೂ ಆಮ್ಲಜನಕವನ್ನು ಸರಬರಾಜು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಆಕ್ಸಿಜನ್ ಅಭಾವ ಎದುರಾಗಿ ಆಕ್ಸಿಜನ್ ಇಲ್ಲದೇ ಕೊರೊನಾ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಕೆಲವರ ಸಾವು ದುಃಖ ತರಿಸಿತ್ತು. ಆ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಗೂ ವೇಗವಾಗಿ ಆಕ್ಸಿಜನ್ ಪೂರೈಸಲಾಗಿದೆ. ವಿದೇಶಗಳಿಂದಲೂ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಮಹಿಳೆಯರು ಆಕ್ಸಿಜನ್ ರೈಲನ್ನು ಚಲಾಯಿಸಿದ್ದು ದೇಶದ ಹೆಮ್ಮೆ ಎಂದು ಮಹಿಳಾ ಲೋಕೋ ಪೈಲಟ್ ಕಾರ್ಯವನ್ನು ಶ್ಲಾಘಿಸಿದರು.
ವಿದೇಶಗಳಿಂದ ನೌಕಾ ಪಡೆ, ವಾಯುಪಡೆಗಳಿಂದ ಡಿಆರ್‌ಡಿಓ ಸಹಕಾರದಿಂದ ಆಮ್ಲಜನಕ, ಪ್ರಯೋಜನಿಕ್ ಟ್ಯಾಂಕರ್‌ಗಳನ್ನು ಭಾರತಕ್ಕೆ ತರಲಾಗಿದೆ. ಎಲ್ಲರ ಶ್ರಮದಿಂದಾಗಿ ಜನರ ಜೀವ ರಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರಾಷ್ಟ್ರದೆಲ್ಲೆಡೆ ಆಮ್ಲಜನಕ ಕೊರತೆಯಾದಾಗ ರಸ್ತೆ ಮೂಲಕ ಸಾಗುವ ಆಕ್ಸಿಜನ್ ಟ್ಯಾಂಕರ್‌ಗಳಿಂದ ಅಧಿಕ ವೇಗವಾಗಿ ಮತ್ತು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ದೇಶದ ಮೂಲೆ ಮೂಲೆಗೆ ತಲುಪಿಸುವಲ್ಲಿ ಭಾರತೀಯ ರೈಲ್ವೆ ನೆರವಾಯಿತು ಎಂದರು.
ಆಕ್ಸಿಜನ್ ಎಕ್ಸ್‌ಪ್ರೆಸ್‌ನ್ನು ಸಂಪೂರ್ಣವಾಗಿ ಮಹಿಳೆಯರೇ ನಿಭಾಯಿಸುತ್ತಿರುವುದು ದೇಶದ ಪ್ರತಿಯೊಬ್ಬ ಭಾರತೀಯರು ಹಾಗೂ ರಾಷ್ಟ್ರದ ಎಲ್ಲ ತಾಯಂದಿರು, ಸೋದರಿಯರಿಗೂ ಖುಷಿ ನೀಡುವಂತಹದ್ದು ಎಂದು ಹೇಳಿದರು.
ಒಂದೆಡೆ ಖಾಲಿ ಟ್ಯಾಂಕರ್‌ಗಳನ್ನು ವಾಯುಪಡೆಯ ವಿಮಾನಗಳ ಮೂಲಕ ಆಮ್ಲಜನಕದ ಘಟಕದವರೆಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಹೊಸ ಆಮ್ಲಜನಕ ಘಟಕಗಳ ಸ್ಥಾಪನೆ ಕೆಲಸ ಕೂಡ ನಡೆದಿದೆ. ಇದರೊಂದಿಗೆ ವಿದೇಶದಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು, ಪ್ರಯೋಜನಿಕ್ ಟ್ಯಾಂಕರ್‌ಗಳನ್ನು ದೇಶಕ್ಕೆ ತರಲಾಗುತ್ತಿದೆ. ನೌಕಾ ಪಡೆ, ಭೂಸೇನೆ, ವಾಯುಪಡೆ, ಡಿಆರ್‌ಡಿಓ ಸಂಸ್ಥೆಗಳು ಜತೆಯಾಗಿ ಕಾರ್ಯನಿರ್ವಹಿಸುತ್ತಿವೆ. ವಿಜ್ಞಾನಿಗಳು, ತಾಂತ್ರಿಕ ಸಿಬ್ಬಂದಿ, ಉದ್ಯಮ ತಜ್ಞರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಸಾಮಾನ್ಯವಾಗಿ ದಿನಕ್ಕೆ ೫೦೦ ಮೆಟ್ರಿಕ್ ಟನ್ ದ್ರವರೂಪದ ವೈದ್ಯಕೀಯ ಆಮ್ಲಜನಕ ಉತ್ಪಾದನೆಯಾಗುತ್ತಿತ್ತು. ಈಗ ಅದು ೯೫೦೦ ಮೆಟ್ರಿಕ್ ಟನ್‌ಗೆ ತಲುಪಿದೆ ಎಂದರು.
ಕೊರೊನಾ ವೈರಸ್ ತೊಗಲಗಿಸಲು ಈವರೆಗೂ ದೇಶದಲ್ಲಿ ಒಂದು ಪ್ರಯೋಗಾಲಯ ಇತ್ತು. ಈಗ ೨೫೦೦ಕ್ಕೂ ಹೆಚ್ಚು ಪ್ರಯೋಗಾಲಯಗಳಿವೆ ಎಂದು ಅವರು ಹೇಳಿದರು.
ದೇಶ ಕೊರೊನಾ ವಿರುದ್ಧ ಹೋರಾಡುತ್ತಿದೆ. ಈ ಹೋರಾಟದ ಜತೆಗೆ ತೌಕ್ತೆ ಮತ್ತು ಯಾಸ್ ಚಂಡಮಾರುತವನ್ನು ಎದುರಿಸಲಾಗಿದೆ ಎಂದು ಅವರು ಹೇಳಿದರು.
ಈ ವರ್ಷ ರೈತರು ದಾಖಲೆಯ ಉತ್ಪಾದನೆ ಮಾಡಿದಂತೆ ದೇಶವು ದಾಖಲೆಯ ಆಹಾರ ಧಾನ್ಯಗಳನ್ನು ಸಂಗ್ರಹಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಆಕ್ಸಿಜನ್ ರೈಲು ಚಲಾಯಿಸಿದ ಲೋಕೋ ಪೈಲಜ್ ಶಿವಿಶಾ ಮತು ಆಮ್ಲಜನಕ ಟ್ಯಾಂಕರ್ ಚಾಲಕ ದಿನೇಶ್ ಉಪಾಧ್ಯಾಯರವರ ಜತೆ ವಿಡಿಯೋ ಸಂವಾದ ನಡೆಸಿದರು.