ಮಹಿಳಾ ಮೇಳ-ಹಬ್ಬಗಳ ಪರಿಕರಗಳ ಮಾರಾಟ

ಕೋಲಾರ, ಆ.೧: ನಗರದ ಬಾಲಾಜಿ ಪ್ರಾರ್ಥನ ಮಂದಿರದಲ್ಲಿ ಶ್ರೀವಾಸವಿ ಮಹಿಳಾ ಮಂಡಳಿಯು ವಾಸವಿ ಮಹಿಳಾ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ನಗರದ ಶ್ರೀವೆಂಕಟರಮಣಸ್ವಾಮಿ ದೇವಾಲಯ ಪಕ್ಕದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಆಷಾಢ ಮಾಸ ಮುಗಿದ ನಂತರ ವಾಸವಿ ಮಹಿಳಾ ಮಂಡಳಿಯು ಪ್ರತಿ ವರ್ಷ ಮೇಳವನ್ನು ಆಯೋಜಿಸುವುದು ವಾಡಿಕೆ. ಆದರೆ, ಕೊರೊನಾ ಕಾರಣದಿಂದ ಎರಡು ವರ್ಷಗಳಿಂದಲೂ ಮೇಳವನ್ನು ಆಯೋಜಿಸಲಾಗಿರಲಿಲ್ಲ. ಆದ್ದರಿಂದ ಈ ವರ್ಷದ ಮೇಳವನ್ನು ಮಂಡಳಿಯು ಉತ್ಸಾಹದಿಂದಲೇ ಆರಂಭಿಸಿತ್ತು.
ಆಷಾಢ ಮಾಸ ಮುಗಿದ ನಂತರ ಆರಂಭವಾಗುವ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳನ್ನು ಆಚರಿಸುವುದರಿಂದ ಹಬ್ಬಕ್ಕೆ ಅಗತ್ಯವಿರುವ ಪೂಜಾ ಮತ್ತು ಅಲಂಕಾರಿಕ, ತಿಂಡಿ ತಿನಿಸುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ.
ಆರ್ಯ ವೈಶ್ಯ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳನ್ನು ಮೇಳದಲ್ಲಿ ಮಳಿಗೆಗಳನ್ನಿಟ್ಟುಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ೨೦೨೨ರ ಮಹಿಳಾ ಮೇಳದಲ್ಲಿಯೂ ಐವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಮಳಿಗೆಗಳನ್ನು ಇಡಲಾಗಿತ್ತು. ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡು ತಮಗಿಷ್ಟವಾದ ಪೂಜಾ ಸಾಮಗ್ರಿಗಳನ್ನು ಖರೀದಿಸಿ, ತಿಂಡಿ ತಿನಿಸುಗಳನ್ನು ಸವಿದರು. ವ್ಯಾಪಾರಿಗಳಿಗೆಗ ವಾಸವಿ ಮಹಿಳಾ ಮಂಡಳಿಯಿಂದಲೇ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಾಸವಿ ಮಹಿಳಾ ಮಂಡಳಿಯು ಪ್ರತಿ ವರ್ಷ ಏರ್ಪಡಿಸುವ ಮೇಳದಿಂದಾಗಿ ಉತ್ಪನ್ನಗಳು ಒಂದೇ ದಿನದಲ್ಲಿ ಹೆಚ್ಚು ಮಾರಾಟ ಮಾಡಲು ಅವಕಾಶ ಸಿಕ್ಕಂತಾಗುತ್ತದೆ, ಕೊರೊನಾ ಎರಡು ವರ್ಷಗಳ ನಂತರ ಈ ಬಾರಿ ಮೇಳ ನಡೆಸುತ್ತಿರುವುದರಿಂದ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಮಾಡಲಾಗಿದೆಯೆಂದು ಮೇಳದಲ್ಲಿ ಮಳಿಗೆ ಇಟ್ಟಿರುವ ವಿನುತಾ ವಿವರಿಸಿದರು.ಮೇಳದ ಉಸ್ತುವಾರಿಯನ್ನು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಉಮಾರವೀಂದ್ರ, ಉಪಾಧ್ಯಕ್ಷೆ ದೇವಿಗುಪ್ತ, ಕಾರ್ಯದರ್ಶಿ ಸತ್ಯಲಕ್ಷ್ಮಿ, ಖಜಾಂಚಿ ವಾಣಿಬಾಲಾಜಿ, ಸಹ ಕಾರ್ಯದರ್ಶಿ ಶೈಲ ಬದರಿನಾಥ್ ಹೊತ್ತುಕೊಂಡಿದ್ದರು.