ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲು ವಿನೋದರೆಡ್ಡಿ ಆಗ್ರಹ

ರಾಯಚೂರು,ಆ.೧- ೬೦ ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೂಡಲೇ ಚಿಕಿತ್ಸೆ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ವಿನೋದರೆಡ್ಡಿ ಒತ್ತಾಯಿಸಿದರು.
ನಗರದ ಹಳೆಯ ಜಿಲ್ಲಾಸ್ಪತ್ರೆಯ ಸ್ಥಳದಲ್ಲಿ ನಿರ್ಮಾಣ ಮಾಡಿರುವ ೬೦ ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಿಸುವ ಸಲುವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ರೂ.೧೫.೦೦ ಕೋಟಿ ವೆಚ್ಚದಲ್ಲಿ ೬೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ ವರ್ಷವೇ ಉರುಳಿತು ಹಾಗೂ ದೇಶದ ಗೃಹಮಂತ್ರಿ ಅಮೀತ್ ಷಾ ಅವರು ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ ೬ ತಿಂಗಳು ಗತಿಸಿದರೂ ಇಲ್ಲಿಯವರೆಗೂ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರಿಗೆ ಸರ್ಕಾರದ ಆರೋಗ್ಯ ಸೇವೆಗಳು ಮರೀಚಿಕೆಯಾಗಿವೆ. ಸರಕಾರದ ಹಣ ಕೇವಲ ಗುತ್ತಿಗೆದಾರರಿಗೆ ವರದಾನವಾಗಿದೆಯೇ? ಉದ್ದೇಶಿತ ಸರ್ಕಾರದ ಯೋಜನೆಯ ಲಾಭ ಜಿಲ್ಲೆಯ ಮಹಿಳಾ ಮತ್ತು ಮಕ್ಕಳಿಗೆ ದೊರೆಯುವಂತಾಗಬೇಡವೇ? ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಇವರ ಆರೋಗ್ಯ ಹೇಗೆ ವೃದ್ಧಿಸಬೇಕು?
ಆದ್ದರಿಂದ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ವೈದ್ಯರು, ಶುಶೂಷಕಿಯರು, ಸಹಾಯಕ ಸಿಬ್ಬಂದಿಗಳ ನೇಮಕ ಮಾಡಿ ಜನರಿಗೆ ಆರೋಗ್ಯ ಸೇವೆಗಳು ಒದಗಿಸಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ನಮ್ಮ ಸಂಘಟನೆಯು ಉಗ್ರ ಸ್ವರೂಪದ ಹೋರಾಟಕ್ಕೆ ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.