ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲು ಸಚಿವರಿಗೆ ಮನವಿ

ರಾಯಚೂರು,ಆ.೮- ನಗರದ ೬೦ ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೂಡಲೇ ಚಿಕಿತ್ಸೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ನಗರದ ಹಳೆಯ ಜಿಲ್ಲಾಸ್ಪತ್ರೆಯ ಸ್ಥಳದಲ್ಲಿ ನಿರ್ಮಾಣ ಮಾಡಿರುವ ೬೦ ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಮಹಿಳಾ ಮತ್ತು ಮಕ್ಕಳ ಅಪೌಷ್ಠಿಕತೆ ನಿವಾರಿಸುವ ಸಲುವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ರೂ.೧೫.೦೦ ಕೋಟಿ ವೆಚ್ಚದಲ್ಲಿ ೬೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ ವರ್ಷವೇ ಕಳೆದು ಹೋಗಿದೆ. ಉದ್ಘಾಟನೆಗೊಂಡು ೬ ತಿಂಗಳು ಗತಿಸಿದರೂ ಇಲ್ಲಿಯವರೆಗೂ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರಿಗೆ ಸರ್ಕಾರದ ಆರೋಗ್ಯ ಸೇವೆಗಳು ಮರೀಚಿಕೆಯಾಗಿವೆ ಆರೋಪಿಸಿದರು.
ಸರಕಾರದ ಹಣ ಕೇವಲ ಗುತ್ತಿಗೆದಾರರಿಗೆ ವರದಾನವಾಗಿದೆಯೇ? ಉದ್ದೇಶಿತ ಸರ್ಕಾರದ ಯೋಜನೆಯ ಲಾಭ ಜಿಲ್ಲೆಯ ಮಹಿಳಾ ಮತ್ತು ಮಕ್ಕಳಿಗೆ ದೊರೆಯುವಂತಾಗಬೇಡವೇ? ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಇವರ ಆರೋಗ್ಯ ಹೇಗೆ ವೃದ್ಧಿಸಬೇಕು?
ಆದ್ದರಿಂದ ರಾಜ್ಯ ಸಚಿವರಾದ ತಾವು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ವೈದ್ಯರು, ಶುಶೂಷಕಿಯರು, ಸಹಾಯಕ ಸಿಬ್ಬಂದಿಗಳ ನೇಮಕ ಮಾಡಿ ಜನರಿಗೆ ಆರೋಗ್ಯ ಸೇವೆಗಳು ಒದಗಿಸಬೇಕೆಂದು ಆಗ್ರಹಿಸಿದರು.
ರಾಯಚೂರು ನಗರದ ಓಪೆಕ್ ಆಸ್ಪತ್ರೆಯನ್ನು ಒಂದು ಪ್ರತ್ಯೇಕ ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಬೇಕು. ಏಕೆಂದರೆ ಈ ಹಿಂದೆ ತೈಲ ಉತ್ಪಾದನೆಗೆ ಪ್ರಸಿದ್ಧಿ ಪಡೆದಿರುವ ಓಪೆಕ್ ರಾಷ್ಟ್ರದ ಅನುದಾನದಿಂದ ನಮ್ಮ ರಾಯಚೂರಿನ ಹಿಂದುಳಿದ ಜನರಿಗೆ ಆರೋಗ್ಯ ಸೌಲಭ್ಯ ಪಡೆಯಲು ಅನುಕೂಲವಾಗಲೆಂದು ಆಗಿನ ತಮ್ಮದೇ ಆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡು ಅತ್ಯುತ್ತಮ ರೀತಿಯಲ್ಲಿ ಓಪೆಕ್ ಆಸ್ಪತ್ರೆ ಪ್ರಾರಂಭಿಸಲಾಯಿತು.ನಂತರ ಈ ಆಸ್ಪತ್ರೆಯನ್ನು ಹೈದ್ರಾಬಾದ್ ಮೂಲದ ಆಪೋಲೋ ಸಂಸ್ಥೆಯವರು ಹಲವಾರು ವರ್ಷಗಳವರೆಗೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುತ್ತಾ, ಎಲ್ಲಾ ತರಹದ ಶಸ್ತ್ರಚಿಕಿತ್ಸೆಗಳು ಇಲ್ಲಿಯೇ ದೊರೆಯುವಂತೆ ಮಾಡಿದ್ದರು. ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶ್ರೀರಾಮುಲು ರವರ ಅವಧಿಯಲ್ಲಿ ಈ ಆಸ್ಪತ್ರೆಯನ್ನು ರಾಯಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ (ರಿಮ್ಸ್)ಗೆ ಬೋಧಕ ಆಸ್ಪತ್ರೆಗೆ ವಿಲೀನಗೊಳಿಸಿದ್ದರಿಂದ ಆಸ್ಪತ್ರೆಯ ಗುಣಮಟ್ಟ ಕಳೆದುಕೊಳ್ಳುತ್ತಾ ಬಂದಿದೆ.
ಸದರಿ ಓಪೆಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪುನಃ ಜನರಿಗೆ ಎಲ್ಲಾ ತರಹದ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳು ದೊರೆಯುವಂತೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಂತಾಗಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರ ಎಂ. ವಿನೋದರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.