ಮಹಿಳಾ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ

ಕಲಬುರಗಿ,ಜು.30-ಮಹಿಳಾ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಡಿಪೋ ನಂ.3ರ ಬಸ್ ಕಂಡೆಕ್ಟರ್ ಅಂಬಿಕಾ ಹುಚ್ಚೇಶ್ವರ ವಠಾರ ಎಂಬುವವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದ್ದು, ಅವರು ಈ ಸಂಬಂಧ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಂಬಿಕಾ ವಠಾರ್ ಅವರು ಸೂಪರ್ ಮಾರ್ಕೆಟ್‍ದಿಂದ ಮೇಳಕುಂದಾ (ಬಿ) ಗ್ರಾಮಕ್ಕೆ ಹೋಗುವ ರೂಟ್‍ನಲ್ಲಿ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಮೇಳಕುಂದಾ (ಕೆ) ಗ್ರಾಮದಿಂದ ಮೇಳಕುಂದಾ (ಬಿ) ಗ್ರಾಮಕ್ಕೆ ರಜೀಯಾ ಸುಲ್ತಾನ್ ಎಂಬ ಅಂಗವಿಕಲ ಮಹಿಳೆ ಪ್ರತಿದಿನ ನಾಲ್ಕು ಸೀಟುಗಳನ್ನು ಹಿಡಿದುಕೊಂಡು ಬಸ್ಸಿನಲ್ಲಿ ಪ್ರಮಾಣ ಮಾಡುತ್ತಿರುತ್ತಾಳೆ. ತಾನು ಕುಳಿತ ನಾಲ್ಕು ಸೀಟುಗಳನ್ನು ಯಾರಿಗೂ ಬಿಟ್ಟು ಕೊಡೆದೆ ಪ್ರಯಾಣ ಮಾಡುತ್ತಿದ್ದ ವಿಷಯವನ್ನು ಇತರ ಪ್ರಯಾಣಿಕರು ಕಂಡೆಕ್ಟರ್ ಗಮನಕ್ಕೆ ತಂದಾಗ ಸೀಟು ಬಿಟ್ಟುಕೊಡುವಂತೆ ಅವರು ಕೋರಿದಾಗಲೆಲ್ಲಾ ತಕರಾರು ಮಾಡುತ್ತ ಬಂದಿದ್ದಾಳೆ. ಇದೇ ರೀತಿ ಜು.27 ರಂದು ಬೆಳಿಗ್ಗೆ 9.30ಕ್ಕೆ ಮೇಳಕುಂದಾ (ಬಿ) ಗ್ರಾಮಕ್ಕೆ ಬಸ್ ಹೋಗುತ್ತಿದ್ದಾಗ ಮೇಳಕುಂದಾ (ಕೆ) ಗ್ರಾಮದಲ್ಲಿ 10-15 ಜನ ಪ್ರಯಾಣಿಕರು ಬಸ್ ಹತ್ತಿದ್ದಾರೆ. ಅದರಲ್ಲಿ ರಜೀಯಾ ಸುಲ್ತಾನ್ ಅವರು ಸಹ ಬಸ್ ಹತ್ತಿ ಮೇಳಕುಂದಾ (ಬಿ) ಗ್ರಾಮಕ್ಕೆ ಆಗಮಿಸಿದ್ದಾರೆ. ನಂತರ ಬಸ್ ಮೇಳಕುಂದಾ (ಬಿ) ಗ್ರಾಮದಿಂದ ಸೂಪರ್ ಮಾರ್ಕೆಟ್‍ಗೆ ಹೋಗುತ್ತಿದ್ದಾಗ ರಜೀಯಾ ಸುಲ್ತಾನ್ 4 ಸೀಟುಗಳನ್ನು ಹಿಡಿದುಕೊಂಡು ಕುಳಿತಿದ್ದಾಗ ನಿನಗೆ ಬೇಕಾದರೆ ಒಂದು ಸೀಟು ಹಿಡಿದುಕೊಂಡು ಉಳಿದ ಪ್ರಯಾಣಿಕರಿಗೆ ಸೀಟು ಬಿಟ್ಟುಕೊಡುವಂತೆ ಕಂಡೆಕ್ಟರ್ ಕೇಳಿದ್ದಾರೆ. ಇದರಿಂದ ರಜೀಯಾ ಸುಲ್ತಾನ್ ಕಂಡೆಕ್ಟರ್‍ಗೆ ಅವಾಚ್ಯವಾಗಿ ಬೈಯ್ದು ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾಳೆ. ನಂತರ ಬಸ್ ಮೇಳಕುಂದಾ (ಕೆ) ಗ್ರಾಮಕ್ಕೆ ಬಂದಾಗ ರಜೀಯಾ ಸುಲ್ತಾನ್ ಪತಿ ಜಿಲಾನಿ ಮುಲ್ಲಾ ಬಸ್ ಹತ್ತಿ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕಂಡೆಕ್ಟರ್ ಜೇಬಿನಲ್ಲಿದ್ದ 1355 ರೂ ಮತ್ತು ಅವರ ಕೊರಳಲ್ಲಿದ್ದ ಅರ್ಧ ತೊಲೆ ಮಂಗಳ ಸೂತ್ರ ಕಳೆದು ಹೋಗಿದೆ. ಈ ಸಂಬಂಧ ಫರತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.