ಮಹಿಳಾ ಪೊಲೀಸ್ ಪೇದೆ ಶವ ಪತ್ತೆ ಆಕೆಯ ಸೋದರ ಆತ್ಮಹತ್ಯೆ

ಹಾಸನ,ಸೆ.೧೭-ನಾಪತ್ತೆಯಾಗಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಸೀಕೆರೆ ತಾಲೂಕಿನ ಸುಧಾ (೩೯) ಮೃತಪಟ್ಟವರು.
ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ ೨೦೬ ರ ಮೈಲನಹಳ್ಳಿ ಗ್ರಾಮದ ಬಳಿಯ ಪೊದೆಯೊಂದರಲ್ಲಿ ಸುಧಾ ಮೃತದೇಹ ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಸುಧಾ ಅವರು ನಾಪತ್ತೆಯಾದ ಸಂಬಂಧಿಸಿದಂತೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಧಾರನ್ನು ಕಾರಿನಲ್ಲಿ ಕರೆದುಕೊಂಡು ಬಂದು ಅವರ ಚಿಕ್ಕಪ್ಪನ ಮಗ ಮಂಜುನಾಥ್ ಹತ್ಯೆಗೈದಿದ್ದಾನೆ ಎಂಬ ವಿಚಾರ ತಿಳಿದುಬಂದಿದೆ.
ಸುಧಾ ಅವರನ್ನು ಕೊಲೆ ಮಾಡಿ, ನಿನ್ನೆ ಸಂಜೆ ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಹಾಗೂ ತುಮಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಅರಸೀಕೆರೆ ತಾಲೂಕಿನ ಆಸ್ಪತ್ರೆಗೆ ರವಾನಿಸಲಾಗಿದೆ.