ಮಹಿಳಾ ಪೊಲೀಸರಿಂದ ಆತ್ಮರಕ್ಷಣಾ ತರಬೇತಿ ಶಿಬಿರವಾಸ್ತವಿಕ ತೊಂದರೆಯನ್ನು ಧೈರ್ಯದಿಂದ ಎದುರಿಸಿ: ನ್ಯಾ.ಅಬ್ದುಲ್ ನಂದಗಡಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ.26: ಹೆಣ್ಣಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಕಾನೂನುಗಳು ಇವೆ. ಅದರ ಜೊತೆಗೆ ಹೆಣ್ಣು ಕಾನೂನು ಚೌಕಟ್ಟು ಮೀರಿ ವಾಸ್ತವಿಕವಾಗಿ ಅನುಭವಿಸುವ ತೊಂದರೆಗೆ ಆತ್ಮವಿಶ್ವಾಸದಿಂದ ಎದುರಿಸುವ ಧೈರ್ಯ ಹೊಂದಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮಾನ್ ಎ. ನಂದಗಡಿ ಅವರು ತಿಳಿಸಿದರು.
ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ವಿಜಯನಗರ ಜಿಲ್ಲಾಡಳಿತ, ಕಂದಾಯ, ಪೊಲೀಸ್, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಜಿಲ್ಲಾ ಕೇಂದ್ರ ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆ ಕ್ರಮಗಳು’ ಕುರಿತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ ವಾಸ್ತವಿಕವಾಗಿ ಎದುರಿಸುವ ಸಮಸ್ಯೆಯಿಂದ ಹೆಣ್ಣು ಹೇಗೆ ರಕ್ಷಿತಗೊಳ್ಳಬೇಕು ಎಂಬುದು ಬಹುಮುಖ್ಯವಾಗಿದೆ. ಕಠಿಣ ಸಂದರ್ಭದಲ್ಲಿ ಮಹಿಳೆಯರು ಬಲಪ್ರದರ್ಶಿಸುವುದು ಅತಿಮುಖ್ಯ, ಶಿಬಿರದ ಮೂಲಕ ವಿದ್ಯಾರ್ಥಿನಿಯರು ತಾವು ಕಲಿತ ಅಂಶಗಳನ್ನು ಇತರರಿಗೂ ತಲುಪಿಸಬೇಕು ಎಂಬುದೇ ಕಾರ್ಯಕ್ರಮದ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಿಶನ್ ಬಿ. ಮಾಡಲಗಿ ಅವರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಣ್ಣುಮಕ್ಕಳಿಗೆ ದೌರ್ಜನ್ಯ ಕಡಿಮೆಯಾಗಿಲ್ಲ, ಹೆಣ್ಣಿನ ಗೌರವ ರಕ್ಷಣೆ ಎನ್ನುವುದು ಕೇವಲ ವಾಕ್ಯಗಳಲ್ಲಿಯೇ ಮುಗಿದು ಹೋಗುವ ಬದಲು ಪ್ರಾಯೋಗಿಕವಾಗಿ ಹೆಣ್ಣು ಶಕ್ತಿಯುತವಾಗಿ ಸಮಸ್ಯೆ ಎದುರಿಸಲು ಧೈರ್ಯವಾಗಿ ಮುಂದುವರೆಯಬೇಕಿದೆ ಎಂದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಟಿಬಿ ಡ್ಯಾಂ ಠಾಣೆಯ ಪಿಎಸ್‍ಐ ಶಿಲ್ಪಾ ಮೂಗನಗೌಡ್ರ ಅವರು ಮಾತನಾಡಿ ಮಹಿಳೆಯರು ಮತ್ತು ದೈಹಿಕ ಬಲ, ಯೋಚನಾ ಬಲದ ಮೂಲಕ ಆತ್ಮರಕ್ಷಣೆಯನ್ನು ಹೊಂದಬೇಕು. ಆತ್ಮರಕ್ಷಣೆಗಾಗಿ ಕರಾಟೆ, ಜೂಡೋ, ಮಾರ್ಷಲ್ ಆಟ್ರ್ಸ್ ಬೇಸಿಕ್ ಕಲಿಕೆಯ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.
ಆತ್ಮರಕ್ಷಣೆಗೆ ಉಪಯೋಗವಾಗಲು ಆಪ್‍ಗಳು ಸಹ ಬಂದಿವೆ ಮೈ ಸೇಫ್ಟಿ ಪಿನ್, ಬೀ ಸೇಫ್, ಇ-ಅಲರಾಂ ಬಗ್ಗೆ ಮಾಹಿತಿ ಹೊಂದಿರಬೇಕು. ಜೊತೆಗೆ ಪೊಲೀಸ್ ಇಲಾಖೆಯ ಇಆರ್‍ಎಸ್‍ಎಸ್ 112 ಸಹಾಯವಾಣಿಯ ಸಹಕಾರ ಪಡೆದುಕೊಳ್ಳಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕವು ಕಿರುಕುಳ ನಡೆಯುವ ಸಂಭವ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಆಂತರಿಕ ವಿಚಾರಗಳನ್ನು ಹಂಚಿಕೊಳ್ಳುವುದು, ಸ್ಟೋರಿ, ಸ್ಟೇಟಸ್ ಹಾಕುವುದನ್ನು ನಿಯಂತ್ರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮಹಿಳಾ ಪೊಲೀಸ್ ಹಾಗೂ ಕರಾಟೆ ಪಟುಗಳು ಆತ್ಮರಕ್ಷಣಾ ಪಟ್ಟುಗಳನ್ನು ಪ್ರದರ್ಶಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಲತಾ ಬಿ. ಹುಲ್ಲೂರ, ಅಪರ ಸಿವಿಲ್ ನ್ಯಾಯಾಧೀಶರಾದ ರಮೇಶ ಬಾಬು ಬಿ.ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಿಶನ್ ಬಿ. ಮಾಡಲಗಿ, ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ತೃಪ್ತಿ ಧರಣಿ , 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜೀವ್ ಕುಮಾರ್ ಜಿ. ಸೇರಿದಂತೆ ಡಿವೈಎಸ್ಪಿ ಮಂಜುನಾಥ್ ಟಿ., ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಗ್ರೇಡ್-2 ತಹಶೀಲ್ದಾರ್ ಮೇಘ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಸವರಾಜ, ಪ್ರಧಾನ ಕಾರ್ಯದರ್ಶಿ ಎ. ಕರುಣಾನಿಧಿ ಪಾಲ್ಗೊಂಡಿದ್ದರು.