ಮಹಿಳಾ ಪದವಿ ಕಾಲೇಜು ಪ್ರಥಮ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ವಿಳಂಬ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಮಾ.23: ನಗರದ ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಥಮ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಘೋಷಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಬಗೆಹರಿಸಲು ಆಗ್ರಹಿಸಿ ಗುರುವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷ ಸ್ನೇಹಾ ಕಟ್ಟಿಮನಿ ಅವರು ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳ ಬಿಎ, ಬಿಎಸಿ, ಬಿಕಾಂ ಬಿಬಿಎ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವು ಇಲ್ಲಿಯವರೆಗೂ ಘೋಷಣೆ ಮಾಡದಿರುವುದು ವಿಶ್ವವಿದ್ಯಾಲಯದ ಅತ್ಯಂತ ಬೇಜವಾಬ್ದಾರಿತನವಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷೆ ಮುಗಿದು ಒಂದು ವರ್ಷ ಕಳೆದಿದೆ, ಎರಡನೇ ಸೇಮಿಸ್ಟರ್ ಪರೀಕ್ಷೆ ಮುಗಿಸಿ ಈಗ ಇದೇ ಮಾರ್ಚ್ 27ರಿಂದ 3ನೇ ಸೆಮಿಸ್ಟರ್ ಪರೀಕ್ಷೆಗಳ ದಿನಾಂಕ ಕೂಡ ಘೋಷಣೆ ಆಗಿದೆ. ಮಹಿಳಾ ವಿಶ್ವ ವಿದ್ಯಾಲಯವು ಇಲ್ಲಿವರೆಗೂ ಯಾವುದೇ ಪರೀಕ್ಷೆಗಳ ಫಲಿತಾಂಶ ಬಿಡದೆ ವಿದ್ಯಾರ್ಥಿಗಳ ಭವಿಷ್ಯದ ಜೋತೆ ಚಲ್ಲಾಟವಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಫಲಿತಾಂಶ ಕುರಿತು ಆತಂಕಕ್ಕೆ ಒಳಗಾಗಿದ್ದು ಈ ಕೂಡಲೇ ಫಲಿತಾಂಶವನ್ನು ಘೋಷಣೆ ಮಾಡಬೇಕು ಹಾಗೂ 3ನೇ ಸೆಮಿಸ್ಟರ್ ಪರೀಕ್ಷೆಗೆ ಸರಿಯಾದ ಕಾಲಾವಕಾಶ ನೀಡಬೇಕೆಂದು ಅವರು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್.ಕೆ., ಜಿಲ್ಲಾ ಸಮಿತಿ ಸದಸ್ಯರಾದ ಪ್ರೀತಿ ದೊಡ್ಡಮನಿ, ಯುವರಾಜ್, ಪೂಜಾ ವಿದ್ಯಾರ್ಥಿಗಳಾದ ಮೇಧಿನಿ, ನೇತ್ರಾವತಿ, ಅಕ್ಷತಾ, ಅಶ್ವಿನಿ, ತ್ರೀವೇಣಿ, ಲಕ್ಷ್ಮಿ, ಮಹಾದೇವಿ, ಭಾಗ್ಯಶ್ರೀ, ನಿಕಿತಾ, ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.