
ದಾವಣಗೆರೆ. ಮಾ.೧೩; ಮಹಿಳಾ ನೌಕರರ ರಕ್ಷಣೆ ಮತ್ತು ಅವರ ಗೌರವವನ್ನು ಕಾಪಾಡುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಮುಖ ಆದ್ಯತೆಯಾಗಿದೆ. ಮಹಿಳೆಯರು ಸಂಘಟನೆಯೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡು ನಾಯಕತ್ವವನ್ನು ವಹಿಸಿಕೊಂಡಾಗ ಮಹಿಳೆಯರ ಸುರಕ್ಷತೆ ಇನ್ನೂ ಬದ್ಧತೆಯಿಂದ ನಿಭಾಯಿಸಲು ಸಾಧ್ಯ. ಅಂತಹ ಮಹಿಳಾ ನಾಯಕಿಯರಿಗೆ ನಮ್ಮ ಸಂಘಟನೆಯು ಸದಾ ಸಹಕಾರ ಮತ್ತು ಮಾರ್ಗದರ್ಶನ ಮಾಡಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ವೆಂಕಟಾಚಲಂ ಹೇಳಿದರು. ಅವರು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ವತಿಯಿಂದ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ 6 ನೇ ಮಹಿಳಾ ಬ್ಯಾಂಕ್ ಉದ್ಯೋಗಿಗಳ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಬ್ಯಾಂಕುಗಳಲ್ಲಿ ಹಲವಾರು ಸಮಸ್ಯೆಗಳು ಹಾಗೂ ಸವಾಲುಗಳಿವೆ. ಸರಕಾರದ ಬ್ಯಾಂಕ್ ಖಾಸಗೀಕರಣ ಹಾಗೂ ವಿಲೀನ ನೀತಿಯು ದೋಷಯುಕ್ತವಾಗಿದೆ. ಬ್ಯಾಂಕಿಂಗ್ ಸೌಲಭ್ಯವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಸೌಲಭ್ಯವಾಗಬೇಕು. ದೇಶದ ಮೂಲೆ ಮೂಲೆಗೆ ಬ್ಯಾಂಕಿಂಗ್ ಸೇವೆಯು ವಿಸ್ತಾರಗೊಳ್ಳಬೇಕು ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಬೇಡಿಕೆಯಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಸರಕಾರವು ವರ್ತಿಸುತ್ತಿರುವುದು ದುರಂತಮಯವಾಗಿದೆ. ಸರಕಾರದ ಖಾಸಗಿಕರಣ ನೀತಿ ಹಾಗೂ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಮಾರುವ ನೀತಿಯ ವಿರುದ್ಧ ನಮ್ಮ ಸಂಘವು ನಿರಂತರವಾಗಿ ಹೋರಾಡಲಿದೆ ಎಂದರು. ಮಹಿಳಾ ಹೋರಾಟಗಾರ್ತಿ ಹೆಚ್.ಜಿ.ಜಯಲಕ್ಷ್ಮಿ ಮಾತನಾಡಿ ಸಂಘಟನೆ ಮತ್ತು ಹೋರಾಟವಿಲ್ಲದೇ ಯಾವುದೇ ಸಮಸ್ಯೆ ಬಗೆಹರಿಯದ ಕಾಲಘಟ್ಟದಲ್ಲಿ ನಾವಿದ್ದೇವೆ. ಮಹಿಳೆಯರಿಗೆ ಸಮಾನತೆ, ಅವರ ಸ್ವಾತಂತ್ರ್ಯ, ಉಡುಗೆ, ತೊಡುಗೆ, ಆಹಾರದ ವಿಷಯದಲ್ಲಿ ಇಂದಿಗೂ ಪುರುಷರು ತಮ್ಮ ದಬ್ಬಾಳಿಕೆಯ ಮನೋಭಾವವನ್ನು ಮಹಿಳೆಯರ ಮೇಲೆ ಬಲಾತ್ಕಾರವಾಗಿ ಹೇರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅಸಂಘಟಿತ ವಲಯದ ಸ್ತ್ರೀಯರಿಗೆ ಸಮಾನವಾದ ಹಕ್ಕು, ಗೌರವ ಇನ್ನೂ ತಲುಪಿಲ್ಲ ಎನ್ನುವುದು ವಿಷಾದನೀಯ. ಮಹಿಳೆಯರು ತಮ್ಮ ಕೆಲಸದ ಸ್ಥಳದಲ್ಲಿ ಆತ್ಮಗೌರವ ಹಾಗೂ ಸುರಕ್ಷಿತವಾಗಿ ಇರುವ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಮುಖ್ಯವಾಗುತ್ತದೆ. ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳಾ ನೌಕರರು ಆತ್ಮಗೌರವದಿಂದ ಕೆಲಸ ಮಾಡಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವೇ ಕಾರಣವಾಗಿದೆ. ಮಹಿಳೆಯರನ್ನು ಸಂಘಟನೆಯು ಸಾಕಷ್ಟು ಅವಕಾಶಗಳನ್ನು ನೀಡಿ ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡುವುದು ನಮ್ಮ ಆದ್ಯತೆಯಾಗಲಿದೆ ಎಂದರು.