ಮಹಿಳಾ ನಿಲಯದಲ್ಲಿ ಮಹಿಳೆ ಆಕಸ್ಮಿಕ ಸಾವು

ಕಲಬುರಗಿ,ಅ.3-ಇಲ್ಲಿನ ಮಹಿಳಾ ನಿಲಯದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ಜ್ಯೋತಿ (35) ಮೃತಪಟ್ಟ ಮಹಿಳೆ.
ಸೇಡಂ ಬಸ್ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ಜ್ಯೋತಿಯನ್ನು ಸೇಡಂ ಸಿಡಿಪಿಒ ಅವರು ಕಳೆದ ಜುಲೈ 26 ರಂದು ರಕ್ಷಣೆ ಮತ್ತು ಪೋಷಣೆಯ ಹಿತದೃಷ್ಟಿಯಿಂದ ರಾಜ್ಯ ಮಹಿಳಾ ನಿಲಯಕ್ಕೆ ತಂದು ದಾಖಲಿಸಿದ್ದರು.
ಎಂದಿನಂತೆ ಅ.1 ರಂದು ಸಹ ಜ್ಯೋತಿ ಬೆಳಿಗ್ಗೆ ತಿಂಡಿ ತಿಂದು ಚಹಾ ಕುಡಿದಿದ್ದಾಳೆ. ಮಧ್ಯಾಹ್ನದ ಊಟಕ್ಕೆ ನಿಲಯದ ಸಿಬ್ಬಂದಿ ಕರೆಯಲು ಹೋದಾಗ ಬರುವುದಿಲ್ಲ ಎಂದು ಹೇಳಿ ಮಲಗಿಕೊಂಡಿದ್ದಾಳೆ. ಪುನ: ಕರೆಯಲು ಹೋದಾಗ ಜ್ಯೋತಿ ಮೈ ಬಿಸಿಯಾಗಿದ್ದನ್ನು ಕಂಡು ಸಿಬ್ಬಂದಿ ಅವಳ ಕೈ ಹಿಡಿದು ಆಟೋದಲ್ಲಿ ಕರೆದುಕೊಂಡು ಹೋಗ ಬೇಕೆಂದಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ. ತಕ್ಷಣವೇ ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನಡೆಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮಹಿಳಾ ನಿಲಯದ ಅಧೀಕ್ಷಕಿ ಅನುರಾಧಾ ಡಿ.ಪಾಟೀಲ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.