ಮಹಿಳಾ ದಿನಾಚರಣೆ: ಹೆಣ್ಣು ಮಕ್ಕಳ ಮೂಲಭೂತ ಸೌಲಭ್ಯಕ್ಕಾಗಿ ಸರಣಿ ಹೋರಾಟ

ಕಲಬುರಗಿ:ಮಾ.2: ಹೆಣ್ಣು ಮಕ್ಕಳ ಮೂಲಭೂತ ಸೌಲಭ್ಯಗಳಿಗಾಗಿ ಸರಣಿ ಹೋರಾಟ ಮತ್ತು ವೈವಿದ್ಯಮಯ ಸಾಂಸ್ಕøತಿಕ ಅಕ್ಯಾಡೆಮಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾರ್ಚ್ 8ರ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಸಂಯುಕ್ತ ಹೋರಾಟ ಸಮಿತಿಯ ಗೌರವಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ದಿನಾಚರಣೆಯನ್ನು ಈ ಬಾರಿ ವ್ಯಾಪಕವಾಗಿ ಆಚರಿಸಲಾಗುವುದು. ಅಂಗನವಾಡಿ, ಬಿಸಿಯೂಟ, ಸಂಜೀವಿನಿ ಸಂಘಟನೆ, ಬ್ಯಾಂಕ್ ನೌಕರರ ಸಂಘ, ಎಲ್‍ಐಸಿ ನೌಕರರ ಸಂಘಟಮೆ, ಕೃಷಿ ಕೂಲಿ ಕಾರ್ಮಿಕರು, ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘ, ವಿದ್ಯಾರ್ಥಿ ಸಂಘಟನೆ, ಯುವಕರ ಸಂಘಟನೆ, ರೈತ ಸಂಘಟನೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆ ಹೀಗೆ ಅನೇಕ ಸಂಘಟನೆಗಳು ಒಗ್ಗೂಡಿ ಸಂಯುಕ್ತ ಹೋರಾಟ ಸಮಿತಿಯ ಮೂಲಕ ಕಾರ್ಯಕ್ರಮ ಜರುಗಲಿವೆ ಎಂದರು.
ನಮ್ಮದು ಪಕ್ಕಾ ಫ್ಯೂಡಲ್ ಪ್ರದೇಶವಾಗಿದೆ. ಹೀಗಾಗಿ ಮಹಿಳೆಯರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳಿಗೂ ಸಂಚಕಾರ ತಪ್ಪಿಲ್ಲ. ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗಾಗಿ ಮೀಸಲಿರಿಸಿದ ಸ್ಥಾನಗಳು ಅವರಿಗೆ ಧಕ್ಕುತ್ತಿಲ್ಲ. ಈ ವಿಷಯದಲ್ಲಿ ಅಸಡ್ಡೆ ಭಾವನೆ ಎಲ್ಲೆಲ್ಲೂ ಮನೆ ಮಾಡಿದೆ. ಈ ಕುರಿತು ಜಾಗೃತಿ ಮೂಡಿಸಲೆಂದು ಮಾರ್ಚ್ 4ರಂದು ಬೆಳಿಗ್ಗೆ 9ರಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸೀಟು ಮಹಿಳೆಯರಿಗೆ ಇರಲಿ, ನೆಮ್ಮದಿ ಶಾಂತಿ ಅವರಿಗೂ ದಕ್ಕಲಿ ಎಂಬ ಘೋಷಣೆಯಡಿ ಅರಿವಿನ ಆಂದೋಲನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಇನ್ನೇನು ಚುನಾವಣೆ ಬಂದಿದೆ. ಚುನಾವಣಾ ಕಾರ್ಯದಲ್ಲಿ ಮಹಿಳಾ ಸಿಬ್ಬಂದಿಗಳ ನಿಯೋಜನೆ ಅನಿವಾರ್ಯ ಮತ್ತು ಅವಶ್ಯಕವಾಗಿದೆ. ದೇಶ ಸೇವೆ ಮಾಡಲು ಮಹಿಳೆಯರು ಯಾವತ್ತೂ ಹಿಂದೇಟು ಹಾಕಿಲ್ಲ, ಹಾಕುವುದೂ ಇಲ್ಲ. ಆದಾಗ್ಯೂ, ಕೆಲಸದ ಸ್ಥಳದಲ್ಲಿ ಶೌಚಾಲಯ, ರಕ್ಷಣೆ, ಶುದ್ಧ ಕುಡಿಯುವ ನೀರು, ಬಸುರಿ ಬಾಣಂತಿಯರಿಗೆ ಚುನಾವಣಾ ಕೆಲಸದಿಂದ ವಿನಾಯಿತಿ ಇತ್ಯಾದಿಗಳನ್ನು ಖಾತ್ರಿಗೊಳಿಸುವಂತೆ ಮಾರ್ಚ್ 6ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಮಾರ್ಚ್ 11ರಂದು ಬೆಳಿಗ್ಗೆ 10-30ಕ್ಕೆ ಅಪ್ಪನ ಕೆರೆಯ ಹತ್ತಿರ ಇರುವ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ದಿನವಿಡೀ ಉಪನ್ಯಾಸ, ನೃತ್ಯ, ಗೀತ ಗಾಯನ, ದೇಸಿ ಕಲಾ ಪ್ರದರ್ಶನಗಳು ಜರುಗಲಿವೆ. ಎಂತಿದ್ದರೂ ಇದು ಹೋರಾಟ ಮಾಡಿ ವಿಜಯ ಸಾಧಿಸಿದ ಸ್ಮರಣಾ ದಿನವಾಗಿದ್ದರಿಂದ ಅಂಗನವಾಡಿ ಮಹಿಳೆಯರು ಕಳೆದ ತಿಂಗಳು 40,000ಕ್ಕೂ ಹೆಚ್ಚು ಕಾರ್ಯಕರ್ತೆಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಖಂಡ ಹತ್ತು ದಿನಗಳವರೆಗೆ ಬೀದಿಯಲ್ಲಿ ಧರಣಿ ಕುಳಿತು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಸದರಿ ದಿನವನ್ನು ಮಹಿಳೆಯರ ಹೋರಾಟದ ವಿಜಯೋತ್ಸವ ದಿನವನ್ನಾಗಿಯೂ ಆಚರಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ, ಕಾರ್ಯದರ್ಶಿ ಸಂಗೀತಾ ಗುತ್ತೇದಾರ್, ಶಿವಲೀಲಾ ಗೋತ್ರೆ, ಪ್ರೊ. ಪುಷ್ಪಾ, ಪದ್ಮಿಣಿ ಕಿರಣಗಿ ಮುಂತಾದವರು ಉಪಸ್ಥಿತರಿದ್ದರು.