ಮಹಿಳಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 10: ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಾಲೂಕು ಪಂಚಾಯಿತಿ ಸಂಡೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಮಟ್ಟದ 19 ವರ್ಷದ ಒಳಗಿನ ವನಿತೆಯರ ಕ್ರಿಕೆಟ್ ಕ್ರೀಡಾಕೂಟವನ್ನು ಪಟ್ಟಣದ ಎಪಿಎಂಸಿ ಶಾಲಾ ಮೈದಾನದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉದ್ಘಾಟಿಸಿದರು. ಸದರಿ ಕ್ರಿಕೆಟ್ ಪಂದ್ಯಾವಳಿಗೆ 7 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಕೃಪಾ ನಿಲಯ ತಂಡ ಮೊದಲ ಬಹುಮಾನವನ್ನು, ಸರ್ಕಾರಿ ಪ್ರೌಢಶಾಲೆ ದೋಣಿಮಲೈ ಎರಡನೇ ಬಹುಮಾನವನ್ನು ಮತ್ತು ಸ್ಮಯರ್ ಪ್ರೌಢಶಾಲೆ ದೇವಗಿರಿ ಮೂರನೇ ಬಹುಮಾನವನ್ನು ಪಡೆದವು. ವಿಜೇತ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಬಹುಮಾನ ಮೊತ್ತವನ್ನು ವಿತರಿಸಲಾಯಿತು. ಮೊದಲ ಬಹುಮಾನ 3000 ಎರಡನೇ ಬಹುಮಾನ 2000 ಮೂರನೇ ಬಹುಮಾನ 1000. ಸದರಿ ಕ್ರೀಡಾಕೂಟದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಚ್ ಎನ್ ಬೋಸ್ಲೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿಲಾನ್, ಮ್ಯಾನೇಜರ್ ಶೇಖರಪ್ಪ, ಟಿ ಪಿ ಓ ಷಣ್ಮುಖಪ್ಪ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.