ಮಹಿಳಾ ದಿನವನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸದೃಢರಾಗಿ ಮಧುಲತಾ ಕರೆ

ಕಲಬುರಗಿ,ಮಾ.14: ಮಹಿಳಾ ದಿನವನ್ನು ಕೇವಲ ಕಾಟಾಚಾರಕ್ಕೆ ಆಚರಿಸದೇ ಸ್ಫೂರ್ತಿಯಾಗಿ ತೆಗೆದುಕೊಂಡು ಸದೃಢಗೊಳ್ಳಬೇಕು ಎಂದು ಮಹಿಳೆಯರಿಗೆ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಮಧುಲತಾ ಅವರು ಕರೆ ನೀಡಿದರು.
ನಗರದಲ್ಲಿ ಮಂಗಳವಾರ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ವತಿಯಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಮಾರ್ಚ್ 8 ಅಂತರ್ರಾಷ್ಟ್ರೀಯ ಮಹಿಳಾ ದಿನವು ಹೋರಾಟದ ಇತಿಹಾಸವನ್ನು ಹೊಂದಿದೆ. ಆ ದಿನ ಫ್ಯಾಶನ್ ಶೋ, ಕೆಲವು ಕಸೂತಿ ವಸ್ತುಗಳನ್ನು, ತಿಂಡಿ, ತಿನಿಸುಗಳನ್ನು ಮಾರಾಟಕ್ಕಿಡುವುದು ಆಗಿಬಿಟ್ಟಿದೆ. ಆದಾಗ್ಯೂ, 1908 ಮಾರ್ಚ್ ಎಂಟರಂದು ನ್ಯೂಯಾರ್ಕ್ ನಗರದಲ್ಲಿ 30,000ಕ್ಕೂ ಹೆಚ್ಚು ಮಹಿಳೆಯರು ಜೀವ ಕೊಟ್ಟು ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದ ದಿನವಾಗಿದೆ ಎಂದರು.
ದುಡಿಮೆಗೆ ತಕ್ಕ ಸಮಾನ ವೇತನ, 8 ಗಂಟೆ ಕೆಲಸದ ಅವಧಿ ಉತ್ತಮ ದುಡಿಮೆಯ ಸೌಲಭ್ಯಗಳಿಗೋಸ್ಕರ ಹೆಣ್ಣು ಮಕ್ಕಳು ಬೀದಿಗಿಳಿದು ಜೀವ ಕೊಟ್ಟ ದಿನ. ಅದನ್ನು ನಾವು ಸ್ಫೂರ್ತಿಯಾಗಿ ತೆಗೆದುಕೊಂಡು ಸಮಾಜದಲ್ಲಿ ಇಂದಿಗೂ ಹೆಣ್ಣು ಮಕ್ಕಳ ಪರಿಸ್ಥಿತಿ ಸುಧಾರಿಸಿಲ್ಲ. ಇಲ್ಲಿ ಹೆಣ್ಣು ಮಕ್ಕಳು ಒಗ್ಗಟ್ಟಾಗಿ ಹೋರಾಟವನ್ನು ಕಟ್ಟಬೇಕು ಹಾಗೂ ತಮ್ಮನ್ನು ತಾವು ಸದೃಢಗೊಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷೆ ಶ್ರೀಮತಿ ಗುಂಡಮ್ಮ ಮಡಿವಾಳ್ ಅವರು ಮಾತನಾಡಿ, ಇಂದು ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಭೋಗದ ವಸ್ತುವಿನಂತೆ ಕಾಣಲಾಗುತ್ತಿದೆ. ಅಶ್ಲೀಲ ಸಿನೇಮಾ ಸಾಹಿತ್ಯ ಹಾಗೂ ಕೆಟ್ಟ ವಿಡಿಯೋಗಳನ್ನು ಮೊಬೈಲ್‍ಗಳಲ್ಲಿ ಹರಿಬಿಡುತ್ತಿರುವುದರಿಂದ ಇಂದು ಚಿಕ್ಕ ಹೆಣ್ಣು ಮಕ್ಕಳು ಅನ್ನದೇ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ನಾವು 21ನೇ ಶತಮಾನದಲ್ಲಿ ಇದ್ದರೂ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಇನ್ನೊಂದು ಕಡೆ ಬೆಲೆ ಏರಿಕೆ ಹಣದುಬ್ಬರ, ಭ್ರಷ್ಟಾಚಾರಗಳ ಹೀನ ಬಲಿಪಶು ಹೆಣ್ಣು ಆಗುತ್ತಾಳೆ. ಅವುಗಳ ವಿರುದ್ಧ ಸಂಘಟಿತ ಹೋರಾಟ ಕಟ್ಟಬೇಕಾಗಿದೆ ಎಂದರು.
ರಾಧಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಮಾಜದ ಏಳಿಗೆಗೆ ಹಲವಾರು ಮಹಾನ್ ವ್ಯಕ್ತಿಗಳ ಕೊಡುಗೆ ಇದೆ. ಹಾಗೆಯೇ ಹೆಣ್ಣು ಮಕ್ಕಳ ಹಿಂದಿನ ಉತ್ತಮ ಸ್ಥಿತಿಗೆ ರಾಜಾರಾಮ್ ಮೋಹನರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ ಫುಲೆ ಮುಂತಾದವರೆಲ್ಲರೂ ಹೋರಾಡಿದ್ದಾರೆ. ಹಾಗೆ ಮಾರ್ಚ್ 8 ಕೂಡ ಹೆಣ್ಣು ಮಕ್ಕಲು ಅವರ ಹಕ್ಕಿಗೆ ಹೋರಾಡಿದ ದಿನವನ್ನು ನಾವು ಇಂದಿನ ಹೆಣ್ಣು ಮಕ್ಕಳ ಸಮಸ್ಯೆಗೆ ಹೋರಾಡಲು ಸ್ಫೂರ್ತಿ ದಿನವಾಗಿ ತೆಗೆದುಕೊಳ್ಳಬೇಕು ಎಂದರು. ಗೌರಮ್ಮ ಅವರು ಕಾರ್ಯಕ್ರಮ ನಿರೂಪಿಸಿದರು. ಹಲವಾರು ಕಾರ್ಯಕರ್ತರು, ಬೆಂಬಲಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.