ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ

ಕೆಂಭಾವಿ:ಸೆ.23:ಮಹಿಳೆಯರಿಗೆ ಸಮಾಜ ಮತ್ತು ಕುಟುಂಬದ ಒತ್ತಡ ನಿರ್ವಹಣೆಗೆ ಅಗತ್ಯ ಜ್ಞಾನವನ್ನು ನೀಡುವಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ನಗನೂರ ದಾಸೋಹ ಮಠದ ಪೀಠಾಧಿಪತಿ ಶ್ರೀ ಶರಣಪ್ಪ ಶರಣರು ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರ ಸಬಲತೆಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಶ್ರಮಿಸುತ್ತಿದೆ. ಜ್ಞಾನ ವಿಕಾಸ ಕಾರ್ಯಕ್ರಮ ಮಹಿಳೆಯರಲ್ಲಿ ಶಿಸ್ತು ಬದ್ದ ಜೊತೆಗೆ ಮಹಿಳಾ ಸಬಲೀಕರಣ ಮಾಡಿ ಮಹಿಳೆಯರಿಗೆ ಧೈರ್ಯ ತುಂಬುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ಮಾತನಾಡಿ, ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮವಾಗಿದೆ. ಮಾಧ್ಯಮದ ಮೂಲಕ ಜನರಿಗೆ ಮಾಹಿತಿ ನೀಡಿದಾಗ ಕಾರ್ಯಕ್ರಮ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ. ಹೀಗಾಗಿ ಇಂತಹ ಚಲನಚಿತ್ರ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸೇವಾ ಪ್ರತಿನಿಧಿ ಶಿವಲೀಲಾ ಹೊಟ್ಟಿ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಶಾಂತಪ್ಪ, ಸಹ ಶಿಕ್ಷಕ ಬಸವರಾಜ, ಶಶಿಕಲಾ ಹಿರೇಮಠ, ರೂಪಾಶ್ರೀ ನೂಲಿ, ಚನ್ನಬಸಮ್ಮ, ಭೀಮರೆಡ್ಡಿ ಕ್ವಾಡಲಗಿ, ಪೂರ್ಣಿಮಾ ಸಿಂಗ್, ಊಮಾದೇವಿ ಹಿರೇಮಠ, ದ್ರಾಕ್ಷಾಯಿಣಿ ಸೇರಿದಂತೆ ಸಂಘದ ಸದಸ್ಯರಿದ್ದರು.