ಮಹಿಳಾ ಚಾಲೆಂಜ್: ಟ್ರೈಲ್ ಬ್ಲೇಜರ್ಸ್ ಚಾಂಪಿಯನ್

ಶಾರ್ಜಾ: ಕರಾರುವಕ್ ಬೌಲಿಂಗ್ ದಾಳಿ ಸಂಘಟಿಸಿದ ಸ್ಮೃತಿ ಮಂಧನಾ ನೇತೃತ್ವದ ಟ್ರೈಲ್ ಬ್ಲೇಜರ್ಸ್, ಸೂಪರ್ ನೋವಾಸ್ ವಿರುದ್ಧ ಇಲ್ಲಿ ನಡೆದ‌ ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ 16 ರನ್ ಗಳ ಗೆಲುವು ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.


ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟ್ರೈಲ್ ಬ್ಲೇಜರ್ಸ್ 20 ಓವರಲ್ಲಿ 8 ವಿಕೆಟ್ ಗೆ 118 ರನ್ ಗಳಿಸಿತು. ಇದಕ್ಕುತ್ತರವಾಗಿ ಸೂಪರ್ ನೋವಾಸ್ 20 ಓವರಲ್ಲಿ 7 ವಿಕೆಟ್ ಗೆ 102 ರನ್ ಗಳಿಸಿ ಸೋಲೊಪ್ಪಿತು.

ಖತೂನ್ ಸ್ಪಿನ್ ಮೋಡಿ:


119 ರನ್ ಗಳ ಗುರಿ ಬೆನ್ನತ್ತಿದ ಸೂಪರ್ ನೋವಾಸ್ ಉತ್ತಮ ಆರಂಭ ಪಡೆಯಲಿಲ್ಲ. 37 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಸೂಪರ್ ನೋವಾಸ್ ಸಂಕಷ್ಟಕ್ಕೆ ಸಿಲುಕಿತು. 4ನೇ ವಿಕೆಟ್ ಗೆ ನಾಯಕಿ ಹರ್ಮನ್ ಪ್ರೀತ್ ಹಾಗೂ ಶಶಿಕಲಾ ಜೋಡಿ ಚೇತರಿಕೆ ನೀಡಿತು. ಶಶಿಕಲಾ (19) ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಅನುಜಾ ಪಾಟೀಲ್ (8), ಖತೂನ್ ಅವರ 19ನೇ ಓವರಲ್ಲಿ ಔಟಾದರು. ನಾಯಕಿ ಹರ್ಮನ್ (30) ನಂತರದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಪೂಜಾ ವಸ್ತ್ರಾಕರ್ ಕೂಡಾ ಅದೇ ಓವರಲ್ಲಿ ಔಟಾದರು. ಖತೂನ್ 3, ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.

ಸ್ಮೃತಿ ಅರ್ಧಶತಕ:


ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಟ್ರೈಲ್ ಬ್ಲೇಜರ್ಸ್ ಉತ್ತಮ ಆರಂಭ ಪಡೆಯಿತು. ನಾಯಕಿ ಸ್ಮೃತಿ ಹಾಗೂ ಡೊಟಿನ್ ಮೊದಲ ವಿಕೆಟ್‌ ಗೆ 71 ರನ್ ಗಳಿಸಿದರು. ಡೊಟಿನ್ (20) ನಿರಾಸೆ ಮೂಡಿಸಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಮೃತಿ 49 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ನೊಂದಿಗೆ 68 ರನ್ ಗಳಿಸಿದರು.

ರಾಧಾ 5 ವಿಕೆಟ್ ದಾಖಲೆ:


ಟ್ರೈಲ್ ಬ್ಲೇಜರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೂಪರ್ ನೋವಾಸ್ ನ ಸ್ಪಿನ್ನರ್ ರಾಧಾ ಯಾದವ್ ನೂತನ ದಾಖಲೆ ನಿರ್ಮಿಸಿದರು. ರಾಧಾ 5 ವಿಕೆಟ್ ಪಡೆಯುವ ಮೂಲಕ ಮಹಿಳಾ ಚಾಲೆಂಜ್ ನಲ್ಲಿ ಇತಿಹಾಸ ನಿರ್ಮಿಸಿದರು.

ಸಂಕ್ಷಿಪ್ತ ಸ್ಕೋರ್:
ಟ್ರೈಲ್ ಬ್ಲೇಜರ್ಸ್ 20 ಓವರಲ್ಲಿ 118/8
(ಸ್ಮೃತಿ 68, ಡೊಟಿನ್ 20, ರಾಧಾ 5-16)
ಸೂಪರ್ ನೋವಾಸ್ 20 ಓವರಲ್ಲಿ 102/7
(ಹರ್ಮನ್ 30, ಶಶಿಕಲಾ 19, ಖತೂನ್ 3-18)
ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ
ಸರಣಿ ಶ್ರೇಷ್ಠ: ರಾಧಾ ಯಾದವ್