ಮಹಿಳಾ ಕೌಶಲಕ್ಕೆ ವೇದಿಕೆಯಾದ ಕೆನರಾ ಉತ್ಸವ

ಉಡುಪಿ, ಜ.೧೪- ಮಣಿಪಾಲದ ಮಹಿಳೆಯರ ಉದ್ಯಮಾಭಿವೃದ್ಧಿ ಕೇಂದ್ರ (ಸಿಇಡಿ) ವತಿಯಿಂದ ಈ ತಿಂಗಳ ೧೨ ಮತ್ತು ೧೩ರಂದು ಮಣಿಪಾಲ (ಸಿಂಡಿಕೇಟ್ ಬ್ಯಾಂಕಿನ ಹೆಡ್‌ಆಫೀಸ್) ಸರ್ಕಲ್ ಕಚೇರಿಯ ಆವರಣದಲ್ಲಿ ಕೆನರಾ ಉತ್ಸವ ಆಯೋಜಿಸಲಾಗಿತ್ತು.

ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸಿಇಡಿ ಈ ಉತ್ಸವದ ಮೂಲಕ ವೇದಿಕೆ ಕಲ್ಪಿಸಿಕೊಟ್ಟಿತ್ತು. ಕಲೆ, ಕುಸುರಿ, ಆಹಾರ ಪದಾರ್ಥ, ಪರಿಸರ ಸ್ನೇಹಿ ಉತ್ಪನ್ನಗಳು, ಫ್ಯಾಷನ್ ಮತ್ತಿತರ ವಿವಿಧ ಕ್ಷೇತ್ರಗಳ ೨೬ ಉದ್ಯಮಶೀಲ ಮಹಿಳೆಯರು ಭಾಗವಹಿಸಿದ್ದರು. ಸಾವಿರಾರು ಮಂದಿ ಗ್ರಾಹಕರು ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಮೇಳ ಉದ್ಘಾಟಿಸಿದ ಜಿಲ್ಲಾಪಂಚಾಯ್ತಿ ಗ್ರಾಮೀಣಾಭಿವೃದ್ಧಿ ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕ ಗುರುದತ್, ಸ್ವಯಂ ಉದ್ಯೋಗಕ್ಕೆ ಒತ್ತು ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಸ್ಫೂರ್ತಿ ನೀಡಬಹುದು ಎಂದರು. ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಆಫೀಸ್ ಪ್ರಧಾನ ವ್ಯವಸ್ಥಾಪಕ ರಾಮ ನಾಯ್ಕ್ ಕೆ. ಅಧ್ಯಕ್ಷತೆ ವಹಿಸಿದ್ದರು. ಮಹಾಪ್ರಬಂಧಕ ಸಾಯಿರಾಂ ಹೆಗ್ಡೆ, ಉಪ ಮಹಾಪ್ರಬಂಧಕ ಪ್ರದೀಪ್ ಆರ್ ಭಕ್ತ, ಉಪ ಮಹಾಪ್ರಬಂಧಕಿ ಪಿ.ಪದ್ಮಾವತಿ ಮತ್ತಿತರರು ಭಾಗವಹಿಸಿದ್ದರು.