ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಪೋಸ್ಟರ್ ಚಳುವಳಿ

ಕಲಬುರಗಿ,ಏ.28: ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ (ಡಬ್ಲ್ಯುಎಫ್‍ಐ) ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕೆಲವು ತರಬೇತುದಾರರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಅಧ್ಯಾಕ್ಷ ಕಾ. ಜಗನ್ನಾಥ್ ಎಸ್. ಹೆಚ್. ಅವರು ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಹಮ್ಮಿಕೊಂಡ ಮಹಿಳಾ ಕುಸ್ತಿ ಪಟುಗಳ ಹೋರಾಟ ಬೆಂಬಲಿಸಿ ಪೋಸ್ಟರ್ ಚಳುವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಸ್ತಿಪಟುಗಳು ದೆಹಲಿಯಲ್ಲಿ ನಡೆಸುತ್ತಿರುವ ಧರಣಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟಾದರೂ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಅಲ್ಲದೇ ಅವರ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಿಲ್ಲ. ಕೇಂದ್ರದ ಆಡಳಿತರೂಢ ಬಿಜೆಪಿ ಪಕ್ಷದ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್‍ರ ಪ್ರಭಾವಕ್ಕೆ ಪೊಲೀಸರು ಮಣಿದಿದ್ದಾರೆ ಎನ್ನುವ ಅನುಮಾನಗಳಿವೆ ಎಂದು ದೂರಿದರು.
ವಿಶ್ವ ಚಾಂಪಿಯನ್‍ಷಿಪ್, ಒಲಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿರುವ ಈ ಕುಸ್ತಿಪಟುಗಳ ದೂರು ಹಾಗೂ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಈ ರೀತಿ ಧರಣಿ ನಡೆಸುತ್ತಿರುವುದು ಇದು ಎರಡನೇ ಬಾರಿ. ಅಲ್ಲದೆ ದೂರು ನೀಡಿರುವ ಏಳು ಸಂತ್ರಸ್ತೆಯರಲ್ಲಿ ಒಬ್ಬ ಬಾಲಕಿಯೂ ಇದ್ದಾಳೆ. ಆದ್ದರಿಂದ ಈ ಪ್ರಕರಣ ಪೋಕ್ಸೋ ಕಾಯ್ದೆ ಅಡಿಯಲ್ಲಿಯೂ ಬರುತ್ತದೆ. ಇಷ್ಟಾದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದನ್ನು ಗುರುತಿಸಿ ಸುಪ್ರೀಂ ಕೋರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಿಂದೆ ಈ ಪ್ರಕರಣದ ತನಿಖೆ ನಡೆಸಿದ ಮೇರಿಕೋಂ ಸಮಿತಿಯ ವರದಿಯನ್ನು ಕ್ರೀಡಾ ಇಲಾಖೆ ಬಹಿರಂಗಪಡಿಸಿಲ್ಲ. ಇದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆರೋಪಿಗಳು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಅಲ್ಲದೇ ಸಾಕ್ಷ ನಾಶಗೊಳಿಸಲು ಯತ್ನಿಸಿದ್ದಾರೆ ಮತ್ತು ದೂರು ಹಿಂಪಡೆಯಲು ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಧರಣಿನಿರತ ಕುಸ್ತಿಪಟುಗಳು ದೂರಿದ್ದಾರೆ ಎಂದು ಅವರು ಹೇಳಿದರು.
ಬೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆ ನೀಡಿರುವ ಸರ್ಕಾರವು ಕ್ರೀಡೆಯಲ್ಲಿ ಹೆಣ್ಣು ಮಕ್ಕಳ ಸಾಧನೆಗೆ ಪೂರಕವಾಗಿ ಸುರಕ್ಷಿತ ವಾತಾವರಣ ಸೃಷ್ಟಿಸಿ ಕೊಡುವುದು ತನ್ನ ಆದ್ಯ ಕರ್ತವ್ಯ ಎಂದು ಭಾವಿಸಬೇಕು. ಆದರೆ ಖ್ಯಾತನಾಮ ಕುಸ್ತಿಪಟುಗಳು ಎರಡು ಬಾರಿ ರಸ್ತೆಗಳಿದು ಧರಣಿ ನಡೆಸಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಆಳುವವರ ಈ ಧೊರಣೆಯು ಮಹಿಳೆಯರ ಬಗ್ಗೆ ತಮಗಿರುವ ತತ್ಸಾರದ ಭಾವನೆಯನ್ನು ತೋರುತ್ತದೆ ಮತ್ತು ದುಷ್ಟ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬುತ್ತದೆ. ಇದರಿಂದಾಗಿ ಕ್ರೀಡಾರಂಗದಲ್ಲಿ ಹೆಣ್ಣು ಮಕ್ಕಳ ಸಾಧನೆ ಹಿಂದೆ ಬೀಳುತ್ತದೆ. ಇಂತಹ ಅನ್ಯಾಯದ ವಿರುದ್ಧ ಧರಣಿ ನಡೆಸುತ್ತಿರುವ ಕುಸ್ತಿಪಟುಗಳ ಜೊತೆಯಲ್ಲಿ ಸಂಘಟನೆ ಒತ್ತಾಸೆಯಾಗಿ ನಿಲ್ಲುತ್ತದೆ ಎಂದು ಅವರು ತಿಳಿಸಿದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಿ, ಅವರ ಸಂಸತ್ತಿನ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಿ ಮತ್ತು ಅವರನ್ನು ಕುಸ್ತಿ ಫೆಡರೇಶನ್‍ನಿಂದ ಹೊರಹಾಕಿ, ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.