(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.29: ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲಿಸಿ ಅಖಿಲ ಭಾರತ ಮಹಿಳಾ ಸಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್ )ಯ ಅಖಿಲ ಭಾರತ ಕರೆಯ ಮೇರೆಗೆ ಎಐಎಂಎಸ್ಎಸ್ ನ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಇಂದು ನಗರದ ಮೀನಾಕ್ಷಿ ವೃತ್ತದ ಬಳಿ ಪ್ರತಿಭಟಿಸಲಾಯಿತು
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ಈಶ್ವರಿಯವರು ಮಾತನಾಡುತ್ತಾ “ಇಂದು ಎಐಎಂಎಸ್ಎಸ್ ವತಿಯಿಂದ ಇಡೀ ದೇಶದಾದ್ಯಂತ ಮಹಿಳಾ ಹೋರಾಟಗಾರರಿಗೆ ಬೆಂಬಲ ಸೂಚಿಸುತ್ತಾ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಭಾರತ ಕುಸ್ತಿ ಫೆಡರೇಶನ್ನಿನ ಅಧ್ಯಕ್ಷರು ಹಾಗೂ ಆಡಳಿತಾರೂಢ ಬಿಜೆಪಿಯ ಸಂಸದರು ಆಗಿರುವ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಅವರ ಹೋರಾಟ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ದೆಹಲಿ ಪೊಲೀಸರು ಶರಣ್ ಸಿಂಗ್ ವಿರುದ್ಧ ಎರಡು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಆದರೆ ಆರೋಪಿ ಮಾತ್ರ ನಿರ್ಭಯವಾಗಿ ಓಡಾಡಿಕೊಂಡಿದ್ದಾನೆ. ಅಲ್ಲದೆ ಸಾಕ್ಷ್ಯ ನಾಶಗೊಳಿಸಲು ಯತ್ನಿಸುತ್ತಿದ್ದಾನೆ ಹಾಗೂ ದೂರು ಹಿಂಪಡೆಯುವಂತೆ ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದೂ ಧರಣಿನಿರತ ಕುಸ್ತಿಪಟುಗಳು ದೂರಿದ್ದಾರೆ. ದಯಮಾಡಿ ನಮ್ಮ ಮನದ ಮಾತು ಕೇಳಿ ಪ್ರಧಾನಿಯವರೇ ಎಂದು ಕುಸ್ತಿಪಟುಗಳು ಅಹವಾಲು ಇಡುತ್ತಿದ್ದಾರೆ.ಆದರೂ ಬೇಟಿ ಬಚಾವೋ ಬೇಟಿ ಪಡಾವೋ ಎಂದು ಗುಡುಗುವ ಪ್ರಧಾನಿ ಮೋದಿಯವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ಇದೇ ಕುಸ್ತಿಪಟುಗಳು ವಿಶ್ವಮಟ್ಟದಲ್ಲಿ ಪದಕವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಾಗ ಶ್ಲಾಘಿಸುವ ಮೋದಿಯವರು ಈಗ ಅದೇ ಕುಸ್ತಿಪಟುಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವಾಗ ಕಿವಿ ಮುಚ್ಚಿಕೊಂಡು ಕುಳಿತಿದ್ದಾರೆ. ಇದು ಹೆಣ್ಣುಮಕ್ಕಳ ಬಗ್ಗೆ ಇರುವ ಸರ್ಕಾರದ ಧೋರಣೆಯನ್ನು ತೋರಿಸಿಕೊಡುತ್ತದೆ.
ಎಲ್ಲಾ ರಂಗದಲ್ಲಿಯೂ ಕೂಡ ಇಂಥ ಘಟನೆಗಳು ಹೆಚ್ಚಾಗುವುದಕ್ಕೆ ಕಾರಣ ಒಂದು ಪುರುಷ ಪ್ರಧಾನ ಧೋರಣೆ ಇನ್ನೊಂದು ಈ ಕೊಳೆತ ಬಂಡವಾಳಶಾಹಿ ವ್ಯವಸ್ಥೆಯ ಸಂಸ್ಕೃತಿ.ಹೆಣ್ಣು ಮಕ್ಕಳನ್ನು ಭೋಗದ ವಸ್ತುವಿನಂತೆ ನೋಡುವ ಮನಸ್ಥಿತಿ ಕ್ರೀಡಾ ಕ್ಷೇತ್ರವನ್ನು ಕೂಡ ಬಿಟ್ಟಿಲ್ಲ ಎಂಬುದನ್ನು ಈ ಘಟನೆ ತೋರಿಸಿಕೊಡುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಕೂಡ ಹಲವಾರು ಕಷ್ಟಗಳನ್ನು ಎದುರಿಸಿಕೊಂಡು ಅವರು ವಿದೇಶ ಮಟ್ಟದಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ ತಂದು ಕೊಡುತ್ತಿದ್ದಾರೆ. ಫೆಡರೇಶನ್ ನ ಅಧ್ಯಕ್ಷರಿಂದಲೇ ಇಂತಹ ಘಟನೆಗಳು ನಡೆದರೆ ಹೆಣ್ಣು ಮಕ್ಕಳು ನಿರ್ಭಯವಾಗಿ ಕ್ರೀಡೆಯಲ್ಲಿ ಭಾಗವಹಿಸಲು ಹೇಗೆ ಸಾಧ್ಯವಾಗುತ್ತದೆ? ಇಂತಹ ವಾತಾವರಣವನ್ನು ನಿರ್ಮೂಲನೆಗೊಳಿಸಬೇಕಾಗಿರುವ ಸರ್ಕಾರ ಮೌನವಾಗಿ ಕುಳಿತುಕೊಂಡಿದೆ. ಈ ನಿರ್ಲಕ್ಷ್ಯದ ಧೋರಣೆ ದುಷ್ಟರಿಗೆ ಮತ್ತಷ್ಟು ಶಕ್ತಿ ತುಂಬುವಂತೆ ಮಾಡುತ್ತದೆ. ಆದರೆ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಹೆಣ್ಣು ಮಕ್ಕಳು ನಿರ್ಭಯವಾಗಿ ಧ್ವನಿ ಎತ್ತುತ್ತಿರುವುದು ಆಶಾದಾಯಕವಾಗಿರುವ ವಿಷಯ. ಅವರ ಹೋರಾಟ ಜಯ ಸಿಗುವವರೆಗೆ ಯಾವುದೇ ರಾಜಿ ಇಲ್ಲದೆ ಮುನ್ನಡೆಯಲಿ.ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ಸರ್ಕಾರವು ಈ ಕೂಡಲೇ ಎಚ್ಚೆತ್ತುಕೊಂಡು ಡಬ್ಲ್ಯೂ ಎಫ್ ಐ ನ ಅಧ್ಯಕ್ಷನನ್ನು ಬಂಧಿಸಬೇಕು ಹಾಗೂ ಕಠಿಣ ಕ್ರಮ ಜರುಗಿಸಬೇಕೆಂದು
ಎಐಎಂಎಸ್ಎಸ್ ಆಗ್ರಹಿಸುತ್ತದೆ.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ವಹಿಸಿಕೊಂಡಿದ್ದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪದ್ಮಾ, ವಿದ್ಯಾ,ರೇಖಾ, ಗಿರಿಜಾ, ಜ್ಞಾನೇಶ್ವರಿ ಸದಸ್ಯರಾದ ಭಾಗ್ಯ, ಗಂಗಮ್ಮ, ಗಾದೆಮ್ಮ ಮತ್ತಿತರರು ಉಪಸ್ಥಿತರಿದ್ದರು.