ಮಹಿಳಾ ಕುಸ್ತಿಪಟುಗಳ ಮೇಲೆ ದೌರ್ಜನ್ಯ: ಸಂಸದ ಬ್ರಿಜ್ ಭೂಷಣ್‍ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಮೇ.29: ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಿಜೆಪಿ ಸಂಸದ ಹಾಗೂ ಇತರರು ಭಾರತೀಯ ಕುಸ್ತಿಪಟುಗಳ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ (ಮಾರ್ಕಸಿಸ್ಟ್) ಪಕ್ಷದ ಜಿಲ್ಲಾ ಘಟಕದ ಪ್ರಮುಖರು ಹಾಗೂ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಒಂದು ತಿಂಗಳಿನಿಂದ ದೇಶದ ಹೆಸರಾಂತ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಹಾಗೂ ಇತರರು ಭಾರತೀಯ ಕುಸ್ತಿಪಟುಗಳ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹಾಗೂ ತರಬೇತಿದಾರರಿಂದ ನಡೆದ ಲೈಂಗಿಕ ಕಿರುಕುಳದ ವಿರುದ್ಧ ಹಾಗೂ ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆ ಪ್ರತಿಭಟನೆಗೆ ದೇಶದ ಹಲವಾರು ಚಿಂತಕರು, ಹೋರಾಟಗಾರರು, ಸಂಘಟನೆಗಳು ಹಾಗೂ ಜನತೆ ಬೆಂಬಲಿಸಿದ್ದಾರೆ. ಆದಾಗ್ಯೂ, ಸರ್ಕಾರ ಆತನಿಗೆ ಬಂಧಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಹೋರಾಟಕ್ಕೆ ಬೆಂಬಲವಾಗಿ ಶನಿವಾರ ದೆಹಲಿಯಲ್ಲಿ ಹೋರಾಟಗಾರರು ಮಹಿಳಾ ಮಹಾ ಪಂಚಾಯಿತಿ ಕರೆದಿದ್ದರು. ಆದಾಗ್ಯೂ, ಬೆಳಿಗ್ಗೆ ದೆಹಲಿ ಪೋಲಿಸರು ಆ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸುಭಾಷಿನಿ ಅಲಿ, ಜಗಮತಿ ಸಂಘವಾನ್, ಮೆಹಮುನ್ನಾ ಮುಲ್ಲಾ ಅವರನ್ನು ಬಂಧಿಸಲಾಗಿದೆ. ಇದರೊಟ್ಟಿಗೆ ಇತರೆ ಮಹಿಳಾ ಸಂಘಟಕರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ವಿಶ್ವದಲ್ಲಿ ಎಲ್ಲಿಯೂ ನಡೆಯದ ದುಷ್ಕರ್ಮವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಇದೆಲ್ಲವೂ ಭಾರತವನ್ನು ವಿಶ್ವದ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅವರು ಕಿಡಿಕಾರಿದರು.
ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸರ್ಕಾರದ ನಡೆ ಉಗ್ರ ಖಂಡನಾರ್ಹ. ತಕ್ಷಣವೇ ಕುಸ್ತಿ ಪಟುಗಳನ್ನು ಬಿಡುಗಡೆ ಮಾಡಿ ಕ್ರೀಡಾ ಒಕ್ಕೂಟದ ಅಧ್ಯಕ್ಷ ಹಾಗೂ ಸಂಸದ ಬ್ರಿಜ್‍ಭೂಷಣಸಿಂಗ್ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕುಸ್ತಿಪಟುಗಳು ಮತ್ತು ಇತರೆ ಹೋರಾಟಗಾರರ ಮೇಲೆ ಹಾಕಿದ ಎಫ್‍ಐಆರ್‍ಗಳನ್ನು ರದ್ದು ಮಾಡಿ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಕೆ. ನೀಲಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂ.ಬಿ. ಸಜ್ಜನ್, ಮೇಘರಾಜ್ ಕಠಾರೆ, ಡಾ. ಮೀನಾಕ್ಷಿ ಬಾಳಿ, ಸುಧಾಮ್ ಧನ್ನಿ, ಪಾಂಡುರಂಗ್ ಮಾವಿನಕರ್, ರವಿ ಶಿವಣಗಿ, ವಿರುಪಾಕ್ಷಪ್ಪ ತಡಕಲ್, ನಾಗಪ್ಪ ರಾಯಚೂರಕರ್, ಡಾ. ಪ್ರಭು ಖಾನಾಪೂರೆ, ಶೋಭಾ ಡೆಂಬರಿ ಮುಂತಾದವರು ಪಾಲ್ಗೊಂಡಿದ್ದರು.