ಮಹಿಳಾ ಕಾಲೇಜ್ ನಲ್ಲಿ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.07: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಾವಿತ್ರಿ ಬಾಯಿ ಫುಲೆ ಯವರ ಜನ್ಮದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ಹನುಮಂತಪ್ಪ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ ” ಸಾವಿತ್ರಿಬಾಯಿ ಫುಲೆ ನೂರಾರು ಕಷ್ಟಗಳನ್ನು ಎದುರಿಸಿದರು ಕೂಡ ತನ್ನ ದಾರಿಯನ್ನು ಬಿಡದೆ ಛಲದಿಂದ ಹೆಣ್ಣು ಮಕ್ಕಳ ಶಿಕ್ಷಣ, ವಿಧವಾ ಪುನರ್ ವಿವಾಹಕ್ಕಾಗಿ ಧ್ವನಿ ಎತ್ತಿದರು ಮತ್ತು  ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ ,ಜಾತಿ ಪದ್ಧತಿ, ಮೌಢ್ಯತೆ ಹಾಗೂ ಮನುವಾದದ ವಿರುದ್ಧ ಹೋರಾಡಿದರು. ಅಂತರ್ಜಾತಿ ವಿವಾಹವನ್ನು ಬೆಂಬಲಿಸಿದರು. ಜ್ಯೋತಿಬಾಫುಲೆ ಯವರಿಂದ ಅಕ್ಷರ ಕಲಿತ ಸಾವಿತ್ರಿಬಾಯಿ ಫುಲೆ ಸಾಕಷ್ಟು ಅಡೆ-ತಡೆಗಳನ್ನು, ಮೇಲ್ವರ್ಗದವರ ಬೈಗುಳ, ನಿಂದನೆಯನ್ನು ಎದುರಿಸಿ ಹೆಣ್ಣು ಮಕ್ಕಳಿಗಾಗಿ ಜನವರಿ 1, 1847ರಲ್ಲಿ ಮೊಟ್ಟ ಮೊದಲ ಶಾಲೆಯನ್ನು ತೆರೆದರು. ಬ್ರಾಹ್ಮಣ ವಿಧವೆಯ ಮಗುವನ್ನು ದತ್ತು ಪಡೆದು ಅವನನ್ನು ಓದಿಸಿ, ವಿದ್ಯಾವಂತನನ್ನಾಗಿ ಮಾಡಿ ನಂತರ ಒಬ್ಬ ವಿಧವೆಯನ್ನು ಅವನಿಗೆ ಮದುವೆ ಮಾಡಿಸಿದರು. ಇದರಿಂದ ತಿಳಿಯುತ್ತದೆ ಸಾವಿತ್ರಿಬಾಯಿ ಫುಲೆ ನುಡಿದಂತೆ ನಡೆಯುವ ವ್ಯಕ್ತಿತ್ವವುಳ್ಳವರಾಗಿದ್ದರು ಎಂದು. ತನ್ನ ಜೀವವನ್ನೇ ಪಣಕ್ಕಿಟ್ಟು ಪ್ಲೆಗ್ ರೋಗದ ವಿರುದ್ಧ ಹೋರಾಡಿದರು.
ಹಾಗಾಗಿಯೇ ಎಷ್ಟೋ ಅವರ ಕ್ರಾಂತಿಕಾರಿ ವಿಚಾರಗಳು ಸ್ವತಃ ನನ್ನ ಜೀವನದ ಮೇಲೂ ಪ್ರಭಾವ ಬೀರಿದವು. ಹಾಗಾಗಿ ನಾನು ಕೂಡ ಮಂದಿರಗಳ ಬದಲಾಗಿ ಶಾಲೆಗಳಿಗೆ ದೇಣಿಗೆ ನೀಡುತ್ತೇನೆ. ವರದಕ್ಷಿಣೆ, ಮೌಢ್ಯತೆ,ಜಾತಿ ಪದ್ಧತಿಯ ವಿರುದ್ಧ ನಿಂತಿದ್ದೇನೆ. ನೀವೆಲ್ಲರೂ ಕೂಡ ಸಾವಿತ್ರಿಬಾಯಿ ಫುಲೆಯವರ ಜೀವನ ಹೋರಾಟ, ಆದರ್ಶ, ವಿಚಾರಗಳನ್ನು  ಮೈಗೂಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವಂತಾಗಬೇಕು” ಎಂದು ಕರೆ ನೀಡಿದರು.
ಎಐಎಂಎಸ್ಎಸ್ ನ  ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡಿ ” ಸಾವಿತ್ರಿಬಾಯಿ ಫುಲೆ ಯಂತಹ ಹಲವಾರು ಮಹಾನ್ ವ್ಯಕ್ತಿಗಳ ಹೋರಾಟದ ಪ್ರತಿಫಲವಾಗಿ ನಮ್ಮ ಸಮಾಜ ಇಷ್ಟರ ಮಟ್ಟಿಗೆ ಬದಲಾಗಿದೆ. ಇಂದು ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ. ಆದರೆ ಈ 21ನೇ ಶತಮಾನದಲ್ಲಿ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಗುಂಪು ಅತ್ಯಾಚಾರ,ಆಸಿಡ್ ದಾಳಿ, ಚುಡಾಯಿಸುವಿಕೆ, ವರದಕ್ಷಣೆ ಕಿರುಕುಳ ದಂತಹ ನೂರಾರು ಸಮಸ್ಯೆಗಳು ನಮ್ಮ ಮುಂದಿವೆ. ಇಂದಿನ ಅಶ್ಲೀಲ ಸಿನಿಮಾ ಸಾಹಿತ್ಯದ ಪ್ರಭಾವದಿಂದಾಗಿ ಹೆಣ್ಣನ್ನು ಭೋಗದ ವಸ್ತುವಿನಂತೆ ನೋಡುವ ಮನಸ್ಥಿತಿ ಹೆಚ್ಚಾಗುತ್ತಿದೆ. ಇಂದು ನಾವೆಲ್ಲರೂ ಸೇರಿ ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. ಈ ದಾರಿಯಲ್ಲಿ ಮುಂದುವರೆದರೆ ಮಾತ್ರ ಸಾವಿತ್ರಿಬಾಯಿ ಫುಲೆ ಅವರಿಗೆ ನೈಜ ಗೌರವ ಸಲ್ಲಿಸಿದಂತಾಗುತ್ತದೆ. ನಾವೆಲ್ಲರೂ ಸೇರಿ ಆ ದಿಕ್ಕಿನಲ್ಲಿ ಮುನ್ನುಗ್ಗೋಣ”  ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾಕ್ಟರ್ ಪ್ರಜ್ಞಾ ವಹಿಸಿಕೊಂಡಿದ್ದರು.
ಎಐಎಂಎಸ್ಎಸ್ ನ ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ವಿದ್ಯಾವತಿ, ಗಿರಿಜಾ, ಸಂಘಟನಾಕಾರರಾದ ಶಿಫಾ, ಕಾಲೇಜಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.