ಮಹಿಳಾ ಕಾಂಗ್ರೆಸ್‍ನಿಂದ ಪ್ರತಿಭಟನೆ

ಹುಬ್ಬಳ್ಳಿ,ಮಾ.2: ಧಾರವಾಡದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಪಾಲಿಕೆ ಸದಸ್ಯರು ಕಾಂಗ್ರೇಸ್ ನ ಪಾಲಿಕೆ ಸದಸ್ಯರ ಮೇಲೆ ಹಲ್ಲೆ ಹಾಗೂ ನೂಕಾಟ ನಡೆಸಿದ್ದಾರೆಂದು ಖಂಡಿಸಿ ಹುಬ್ಬಳ್ಳಿ ಪಾಲಿಕೆ ಆವರಣದಲ್ಲಿ ಬುಧವಾರ ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪಾಲಿಕೆ ಆವರಣದವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ಹುಧಾ ಪಾಲಿಕೆ ಬಿಜೆಪಿ ಸದಸ್ಯರ ವಿರುದ್ಧ ನೂರಾರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಸಮಿತಿ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ನಮ್ಮ ಕಾಂಗ್ರೆಸ್ ಸದಸ್ಯರಿಗೆ ಬಿಜೆಪಿ ಸದಸ್ಯರಿಂದ ಹಲ್ಲೆಯಾಗಿದೆ ಎಂದು ಆರೋಪಿಸಿ ಅವರು, ಶೀಘ್ರವೇ ಬಿಜೆಪಿ ಸದಸ್ಯರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹಲ್ಲೆ ಮಾಡಿದ ಬಿಜೆಪಿ ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಶಿವು ಹಿರೇಮಠ ಇವರನ್ನು ಮೂರು ಸಾಮಾನ್ಯ ಸಭೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಅವರು, ಇಂತಹ ಘಟನೆಗಳು ಮತ್ತೇ ಮರುಕಳಿಸಿದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದು ಪಾಲಿಕೆಯ ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ಹಾರಿಹಾಯ್ದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಇದ್ದರು.