ಮಹಿಳಾ ಉದ್ಯಮಿಗಳಿಗೆ ಹೊಸ ದಾರಿ ತೋರಿದ ಡಿಜಟಲ್

ನಗರದಲ್ಲಿ ಇಂದು ನಡೆದ ೧೦ ಸಾವಿರ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ಕುರಿತ ತರಬೇತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಚಾಲನೆ ನೀಡಿದರು. ಉಬುಂಟು ಸಂಸ್ಥೆಯ ಮುಖ್ಯಸ್ಥೆ ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಮತ್ತಿತರರು ಇದ್ದಾರೆ.

ಬೆಂಗಳೂರು,ಆ. ೨- ಡಿಜಿಟಲ್ ಪರಿವರ್ತನೆ ಮಹಿಳಾ ಉದ್ಯಮಿಗಳಿಗೆ ಹೊಸ ದಾರಿ ತೋರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಮಹಿಳಾ ಉದ್ಯಮಿಗಳ ಒಕ್ಕೂಟ ಉಬಂಟು ಮತ್ತು ಉನಿಸ್ಕಾಪ್ ಜಂಟಿಯಾಗಿ ಆಯೋಜಿಸಿರುವ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಇಂದು ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ದೈತ್ಯವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಭಾಗದ ಕರಕುಶಲ ಮತ್ತು ಸಣ್ಣ ಉದ್ಯಮಿಗಳಿಗೆ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯ ತರಬೇತಿ ಅವಶ್ಯಕವಾಗಿದೆ ಎಂದರು.
ಡಿಜಿಟಲ್ ಮಾರುಕಟ್ಟೆ ವ್ಯವಹಾರ ಮುಖಸ್ಥುತೆ ಹೊಂದಿರುವುದಿಲ್ಲ. ಇಲ್ಲಿ ಮಾರಾಟಕ್ಕಿಟ್ಟ ವಸ್ತುಗಳ ಗುಣಮಟ್ಟ ಮತ್ತು ನಂಬಿಕೆಯೇ ಮುಖ್ಯ ಬಂಡವಾಳ. ಇಲ್ಲಿ ವಸ್ತುಗಳನ್ನು ತಯಾರು ಮಾಡುವವರು, ಮಾರುವವರು ಮತ್ತು ಕೊಳ್ಳುವವರಿಗೆ ಪರಿಚಯವಿರುವುದಿಲ್ಲ. ಇಲ್ಲೇನಿದ್ದರೂ ನಂಬಿಕೆ ಎಂಬ ಬಂಡವಾಳ ಹಣಕ್ಕಿಂತ ಮುಖ್ಯವಾಗಿರುತ್ತದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಮಹಿಳೆಯರು ಇಂಜಿನ್ ಇದ್ದಂತೆ. ಇದನ್ನು ಮನಗಂಡು ರಾಜ್ಯಸರ್ಕಾರ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಮಹಿಳಾ ಸ್ವಸಹಾಯ ಸಂಘಗಳನ್ನು ಪ್ರೋತ್ಸಾಹಿಸಲು ೩೩ ಸಾವಿರ ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ಮತ್ತು ಮಾರುಕಟ್ಟೆ ವಿಸ್ತರಣೆ ಯೋಜನೆಗೂ ಚಾಲನೆ ನೀಡಲಾಗಿದೆ ಎಂದರು.
ದೇವರು ಎಲ್ಲವನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಮಹಿಳೆಯರನ್ನು ಸೃಷ್ಟಿಸಿದ. ಮಹಿಳೆಯರು ಏನೂ ಬೇಕಾದರು ಸೃಷ್ಟಿಸುವ ಶಕ್ತಿ ಹೊಂದಿದ್ದಾರೆ. ಸ್ವಸಹಾಯ ಸಂಘದ ಮೂಲಕ ಇಂದು ರಾಜ್ಯದ ಮಹಿಳೆಯರು ಬೆಳೆಸುತ್ತಿರುವ ಕಿರು ಉದ್ಯಮಗಳಿಗೆ ಡಿಜಿಟಲ್ ತರಬೇತಿ ನೀಡುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸುವ ಕಾರ್ಯವನ್ನು ಮಹಿಳಾ ಉದ್ಯಮ ಸಂಘಗಳು ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಉಬಂಟು ಅಧ್ಯಕ್ಷೆ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಗಣಿ ಮತ್ತು ಸಣ್ಣ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು